ʼಅಸಮ್ಮತಿಯನ್ನುʼ ಮಟ್ಟ ಹಾಕಲು ಉಗ್ರ ನಿಗ್ರಹ ಕಾನೂನು ದುರ್ಬಳಕೆ ಸಲ್ಲದು: ಜಸ್ಟಿಸ್ ಡಿ.ವೈ ಚಂದ್ರಚೂಡ್
"ಸ್ವಾತಂತ್ರ್ಯ ಹರಣ, ಅದು ಒಂದು ದಿನದ ಮಟ್ಟಿಗಾದರೂ ಬಹಳ ಗಂಭೀರವಾದ ವಿಚಾರ"

ಹೊಸದಿಲ್ಲಿ : "ಉಗ್ರ ನಿಗ್ರಹ ಕಾನೂನನ್ನು ಅಸಮ್ಮತಿಯನ್ನು ಮಟ್ಟ ಹಾಕಲು ದುರುಪಯೋಗಗೊಳಿಸಬಾರದು" ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ಡಿ ವೈ ಚಂದ್ರಚೂಡ್ ಹೇಳಿದ್ದಾರೆ. ಭಾರತ ಮತ್ತು ಅಮೆರಿಕಾ ನಡುವಿನ ಕಾನೂನು ಸಂಬಂಧಗಳ ಕುರಿತಂತೆ ಸಮಾರಂಭವೊಂದರಲ್ಲಿ ಅವರು ಸೋಮವಾರ ಮಾತನಾಡುತ್ತಿದ್ದರು.
"ಉಗ್ರ ನಿಗ್ರಹ ಕಾನೂನು ಸೇರಿದಂತೆ ಕ್ರಿಮಿನಲ್ ಕಾನೂನನ್ನು ಅಸಮ್ಮತಿಯನ್ನು ಮಟ್ಟ ಹಾಕಲು ಅಥವಾ ನಾಗರಿಕರಿಗೆ ಕಿರುಕುಳ ನೀಡಲು ಬಳಸಬಾರದು. ಅರ್ನಬ್ ಗೋಸ್ವಾಮಿ ಪ್ರಕರಣದಲ್ಲಿ ನನ್ನ ತೀರ್ಪಿನಲ್ಲಿ ನಾನು ಅಭಿಪ್ರಾಯಿಸಿದಂತೆ, ನಾಗರಿಕರ ಸ್ವಾತಂತ್ರ್ಯವನ್ನು ಕಸಿಯುವುದರ ವಿರುದ್ಧ ಹೋರಾಡಲು ನ್ಯಾಯಾಲಯಗಳು ಮೊದಲ ಆಯ್ಕೆಯಾಗಿ ಮುಂದುವರಿಯಬೇಕು" ಎಂದು ಅವರು ಹೇಳಿದರು.
"ಸ್ವಾತಂತ್ರ್ಯ ಹರಣ, ಅದು ಒಂದು ದಿನದ ಮಟ್ಟಿಗಾದರೂ ಬಹಳ ಗಂಭೀರವಾದ ವಿಚಾರ" ಎಂದು ಇಂಡೋ-ಯುಎಸ್ ಜಾಯಿಂಟ್ ಸಮ್ಮರ್ ಕಾನ್ಫರೆನ್ಸ್‍ನಲ್ಲಿ ಅವರು ಹೇಳಿದರು.
ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯಿದೆಯ ಅಡಿಯಲ್ಲಿ ಭೀಮಾ ಕೋರೆಗಾಂವ್, ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಬಂಧಿತರಾಗಿ ಕಳೆದೊಂದು ವರ್ಷದಿಂದ ಜೈಲಿನಲ್ಲಿದ್ದ ಹಾಗೂ ಇತ್ತೀಚೆಗೆ ನಿಧನರಾದ ಆದಿವಾಸಿ ಹಕ್ಕುಗಳ ಹೋರಾಟಗಾರ ಫಾ ಸ್ಟ್ಯಾನ್ ಸ್ವಾಮಿ ಸಾವಿನ ಹಿನ್ನೆಲೆಯಲ್ಲಿ ಚಂದ್ರಚೂಡ್ ಅವರ ಹೇಳಿಕೆ ಮಹತ್ವ ಪಡೆದಿದೆ.







