ಐಷಾರಾಮಿ ಕಾರಿಗೆ ತೆರಿಗೆ ವಿನಾಯಿತಿ ಕೋರಿದ ನಟ ವಿಜಯ್ ಅರ್ಜಿ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್
1 ಲಕ್ಷ ರೂ. ದಂಡ, ಎರಡು ವಾರಗಳಲ್ಲಿ ತೆರಿಗೆ ಪಾವತಿಸುವಂತೆ ಆದೇಶ

photo: Indian express
ಚೆನ್ನೈ,ಜು.13: ತಾನು ಆಮದು ಮಾಡಿಕೊಂಡಿರುವ 6.95ರಿಂದ 7.95 ಕೋಟಿ ರೂ. ಮೌಲ್ಯದ ರೋಲ್ಸ್ ರಾಯ್ಸ್ ಗೋಸ್ಟ್ ಕಾರಿಗೆ ತೆರಿಗೆ ರಿಯಾಯಿತಿ ನೀಡಬೇಕೆಂದು ಕೋರಿ ನ್ಯಾಯಾಲಯದ ಮೆಟ್ಟಲೇರಿದ್ದ ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಗೆ ಮದ್ರಾಸ್ ಹೈಕೋರ್ಟ್ 1 ಲಕ್ಷ ರೂ. ದಂಡ ವಿಧಿಸಿದೆ.
2012ರಲ್ಲಿ ಈ ಬಗ್ಗೆ ವಿಜಯ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಎಂ. ಸುಬ್ರಹ್ಮಣ್ಯನ್ ಅವರು ಮಂಗಳವಾರ ವಜಾಗೊಳಿಸಿದರು ಹಾಗೂ ದಂಡದ ಮೊತ್ತವನ್ನು ತಮಿಳುನಾಡು ಮುಖ್ಯಮಂತ್ರಿಯವರ ಕೋವಿಡ್-19 ಪರಿಹಾರ ನಿಧಿಯಲ್ಲಿ ಜಮೆ ಮಾಡುವಂತೆ ಆದೇಶಿಸಿದರು ಮತ್ತು ಬಾಕಿ ತೆರಿಗೆಯನ್ನು ಎರಡು ವಾರದೊಳಗೆ ಪಾವತಿಸುವಂತೆಯೂ ಸೂಚಿಸಿದರು.
2012ರಲ್ಲಿ ತಾನು ಆಮದು ಮಾಡಿಕೊಂಡಿದ್ದ ರೋಲ್ಸ್ ರಾಯ್ಸ್ ಗೋಸ್ಟ್ ಗೆ ಪ್ರವೇಶ ತೆರಿಗೆಯನ್ನು ವಿಧಿಸಿದ್ದಕ್ಕಾಗಿ ವಿಜಯ್ ಅವರು ಚೆನ್ನೈನ ಪ್ರಾದೇಶಿಕ ಸಾರಿಗೆ ಕಚೇರಿಯ ಸಹಾಯಕ ಆಯುಕ್ತರು ಹಾಗೂ ಮೋಟಾರು ವಾಹನ ಪರಿವೀಕ್ಷಕರ ವಿರುದ್ಧ ವಿಜಯ್ ಅವರು ಮದ್ರಾಸ್ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಕಾರನ್ನು ಇಂಗ್ಲೆಂಡ್ ನಿಂದ ಆಮದು ಮಾಡಿಕೊಳ್ಳಲಾಗಿತ್ತು.





