ರಾಹುಲ್ ಗಾಂಧಿಯನ್ನು ದಿಲ್ಲಿಯಲ್ಲಿ ಭೇಟಿಯಾದ ಪ್ರಶಾಂತ್ ಕಿಶೋರ್

ಹೊಸದಿಲ್ಲಿ: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ದಿಲ್ಲಿಯ ಅವರ ನಿವಾಸದಲ್ಲಿ ಮಂಗಳವಾರ ಭೇಟಿಯಾದರು ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ವರದಿಗಳ ಪ್ರಕಾರ, ಪಕ್ಷದ ಹಿರಿಯ ಮುಖಂಡರಾದ ಪ್ರಿಯಾಂಕಾ ಗಾಂಧಿ, ಕೆ.ಸಿ.ವೇಣುಗೋಪಾಲ್ ಹಾಗೂ ಪಂಜಾಬ್ ರಾಜ್ಯ ಉಸ್ತುವಾರಿ ಹರೀಶ್ ರಾವತ್ ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆ ಯಾಕೆ ನಡೆಯಿತು ಎಂದು ಸ್ಪಷ್ಟವಾಗಿಲ್ಲವಾದರೂ, ಪಂಜಾಬ್‌ನ ಕಾಂಗ್ರೆಸ್ ಘಟಕದಲ್ಲಿನ ಒಳ ಜಗಳ ಹಾಗೂ ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ ಎನ್ನಲಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹಾಗೂ ಮಾಜಿ ಸಚಿವ ನವಜೋತ್ ಸಿಂಗ್ ಸಿಧು ನಡುವೆ ಶೀತಲ ಸಮರ ನಡೆಯುತ್ತಿದೆ. ಈ ಇಬ್ಬರನ್ನು ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಇತ್ತೀಚೆಗೆ ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಪಂಜಾಬ್ ನಲ್ಲಿ ಕಾಂಗ್ರೆಸ್ ನ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದೆ ಹಾಗೂ ಮುಂದಿನ ವರ್ಷದ ಆರಂಭದಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆ ನಿಗದಿಯಾಗುವುದರೊಂದಿಗೆ ಪಕ್ಷದ ನಾಯಕರು ಸಮಸ್ಯೆ ಬಗೆಹರಿಯದೇ ಇರುವುದರಿಂದ ವಿಚಲಿತರಾಗಿದ್ದಾರೆ ಎನ್ನಲಾಗಿದೆ.
ಕಳೆದ ವಾರ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಕಿಶೋರ್ ಅವರನ್ನು ದಿಲ್ಲಿಯಲ್ಲಿರುವ ತಮ್ಮ ನಿವಾಸವಾದ ಕಪುರ್ಥಾಲಾ ಹೌಸ್ ನಲ್ಲಿ ಭೇಟಿಯಾಗಿದ್ದರು.





