ಪೊಲೀಸ್ ಇಲಾಖೆಯಲ್ಲಿ 206 ಹೊಸ ಹುದ್ದೆಗಳಿಗೆ ಮಂಜೂರಾತಿ: ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು, ಜು.13: ಅಪರಾಧ ನಡೆದ ಸ್ಥಳದಲ್ಲಿ ತ್ವರಿತವಾಗಿ ಶೋಧ ಕಾರ್ಯ ಕೈಗೊಳ್ಳಲು ಅನುಕೂಲವಾಗುವಂತೆ ಪೊಲೀಸ್ ಇಲಾಖೆಯಲ್ಲಿ 206 ಹೊಸ ಹುದ್ದೆಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಮಂಗಳವಾರ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಪೊಲೀಸ್ ಇಲಾಖೆಯ ಸಬಲೀಕರಣಕ್ಕೆ ಹೊಸ ಯೋಜನೆಗಳ ಸಮರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ರಾಜ್ಯದ ಪೊಲೀಸ್ ಪಡೆಯು ಅತ್ಯಂತ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಪೊಲೀಸ್ ಸಿಬ್ಬಂದಿಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾನಿಧಿ ಯೋಜನೆಗೆ ಚಾಲನೆ ನೀಡಲಾಗಿದೆ. ಆರೋಗ್ಯ ಭಾಗ್ಯ ಯೋಜನೆಯಲ್ಲಿ ಇದ್ದಂತಹ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಇಂದು ಪದಕಗಳನ್ನು ಪಡೆಯುತ್ತಿರುವ ಸಾಹಸಿ ಪೊಲೀಸ್ ಸಿಬ್ಬಂದಿಗೆ ಅಭಿನಂದನೆಗಳು ಎಂದು ಮುಖ್ಯಮಂತ್ರಿ ಹೇಳಿದರು.
ಶಿಗ್ಗಾವಿಯ ಕೆಎಸ್‍ಆರ್ ಪಿ ಪಬ್ಲಿಕ್ ಶಾಲೆಯನ್ನು ಮೇಲ್ದರ್ಜೆಗೆ ಏರಿಸಲಾಗುವುದು. 50 ನೂತನ ಪೊಲೀಸ್ ಬಸ್‍ಗಳನ್ನು 6.09 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗಿದೆ. 10,032 ವಸತಿ ಗೃಹ ನಿರ್ಮಾಣ ಮಾಡಲು 25 ಕೋಟಿ ರೂ.ಮೀಸಲಿಡಲಾಗಿದೆ. ಸ್ವಂತ ಕಟ್ಟಡಗಳಿಲ್ಲದ ಪೊಲೀಸ್ ಠಾಣೆಗಳಿಗೆ, ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ನೀಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.
ನೆರೆಹಾನಿ ಹಾಗೂ ಕೋವಿಡ್ ನಿರ್ವಹಣೆ ವೇಳೆ ರಕ್ಷಣಾ ಪಡೆಗಳು ಸಲ್ಲಿಸಿರುವ ಸೇವೆ ಶ್ಲಾಘನೀಯವಾದದ್ದು. ನಮ್ಮ ರಾಜ್ಯದ ಪೊಲೀಸ್ ಇಲಾಖೆಯು ಇಡೀ ದೇಶಕ್ಕೆ ಮಾದರಿ ಪಡೆಯಾಗಿ ಹೊರಹೊಮ್ಮಬೇಕು. ಇದಕ್ಕಾಗಿ ರಾಜ್ಯ ಸರಕಾರ ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡಲಿದೆ. ಬೆಂಗಳೂರಿನಲ್ಲಿ 7,500 ಕ್ಯಾಮೆರಾ ಅಳವಡಿಸಿ, ಮಹಿಳೆಯರ ಸುರಕ್ಷತೆಗೆ ಒತ್ತ ನೀಡಲಾಗಿದೆ. ರಾತ್ರಿ ಗಸ್ತು ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ, ವಿಪತ್ತು ವೇಳೆ ಜನರ ಆಸ್ತಿಪಾಸ್ತಿ ರಕ್ಷಣೆಗೆ ಸದಾ ಸನ್ನದ್ಧವಾಗಿರುವ ನಮ್ಮ ಅಗ್ನಿಶಾಮಕ ತುರ್ತು ಪಡೆಯು ರಾಷ್ಟ್ರಮಟ್ಟದಲ್ಲಿ ಅಗ್ರ ಸ್ಥಾನದಲ್ಲಿದೆ. ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಅಗ್ನಿಶಾಮಕ ಠಾಣೆ ತೆರೆಯಲು ಯೋಜನೆ ರೂಪಿಸಲಾಗಿದೆ. ಬೆಂಕಿ, ಕಟ್ಟಡ ಕುಸಿತ ಎದುರಿಸಲು ಆಧುನಿಕ ಉಪಕರಣ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ಅಗ್ನಿಶಾಮಕ ಮತ್ತು ತುರ್ತುಸೇವೆ, ಗೃಹ ರಕ್ಷಕ ದಳ, ಪೌರ ರಕ್ಷಣೆ ಹಾಗೂ ವಿಪತ್ತು ಸ್ಪಂದನಾ ಪಡೆಯ 236 ಸಿಬ್ಬಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ‘ಮುಖ್ಯಮಂತ್ರಿಗಳ ಪದಕ' ಪ್ರದಾನ ಮಾಡಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ದೇಶದಲ್ಲಿಯೇ ಮೊದಲ ಬಾರಿಗೆ ಅಪರಾಧ ಶೋಧನೆಯಲ್ಲಿ ಕರ್ನಾಟಕ ಹೊಸ ಯುಗವನ್ನು ಪ್ರಾರಂಭ ಮಾಡಿದೆ. ಅಪರಾಧ ನಡೆದ ಕೂಡಲೇ ವಿಜ್ಞಾನದ ಜ್ಞಾನ ಇರುವಂತಹ ಎಫ್‍ಎಸ್‍ಎಲ್ ಅಧಿಕಾರಿ ಘಟನಾ ಸ್ಥಳಕ್ಕೆ ಹೋಗಬೇಕು. ಕೆಲವೇ ನಿಮಿಷಗಳಲ್ಲಿ ಸಾಕ್ಷಿ ಸಂರಕ್ಷಣೆ ಮಾಡಬೇಕಾದದ್ದು ಬಹಳ ಮುಖ್ಯ. ಹೀಗಾಗಿ 206 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ ಎಂದರು.
ಅವರಿಗೆ ವಿಶೇಷ ತರಬೇತಿ ನೀಡಿ ಪ್ರತಿ ಜಿಲ್ಲೆಗೂ ನೇಮಕ ಮಾಡಲಾಗುವುದು. ಅತ್ಯಂತ ಹೇಯ, ದೊಡ್ಡ ಕೃತ್ಯಗಳು ಸಂಭವಿಸಿದಾಗ ಈ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುವುದು. ಇಂದು ಪೊಲೀಸ್ ಇಲಾಖೆಯಲ್ಲಿ ಮಹತ್ವದ ತಿರುವು ಪಡೆದ ದಿನವಾಗಿದೆ. ಅಪರಾಧ ನಿಯಂತ್ರಣ, ಅಪರಾಧ ತಡೆ, ಶೀಘ್ರ ಶೋಧನೆ ಬಹಳ ಮುಖ್ಯ. ಕಳೆದೆರಡು ವರ್ಷದಲ್ಲಿ ಅಪರಾಧ ನಿಯಂತ್ರಣದಲ್ಲಿ ಬಹಳಷ್ಟು ಯಶಸ್ಸು ಗಳಿಸಿದ್ದೇವೆ. ಇದಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಅವರು ಹೇಳಿದರು.
ಬೇರೆ ಬೇರೆ ದೇಶಗಳಲ್ಲಿ ಅಪರಾಧ ನಡೆದ ಕೂಡಲೇ ವಿಜ್ಞಾನದ ಜ್ಞಾನವುಳ್ಳ ಅಧಿಕಾರಿ ಶೀಘ್ರವಾಗಿ ಸ್ಥಳದಲ್ಲೇ ಶೋಧನೆ ಮಾಡುತ್ತಾರೆ. ಅದು ನಮ್ಮಲ್ಲೂ ಆಗಬೇಕು. ಅಪರಾಧ ತನಿಖೆಯಲ್ಲಿ ಬಹಳಷ್ಟು ಬದಲಾವಣೆಯನ್ನು ತರಲಾಗುವುದು. ಪೊಲೀಸ್ ಸಿಬ್ಬಂದಿಯ ಮಕ್ಕಳ ಶಿಕ್ಷಣಕ್ಕಾಗಿ ಜಾರಿಗೊಳಿಸಿರುವ ವಿದ್ಯಾನಿಧಿ ಯೋಜನೆಯಡಿ 1000 ದಿಂದ 40 ಸಾವಿರ ರೂ.ವರೆಗೂ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.
ಆರ್ಥಿಕ ಅಪರಾಧ, ಸೈಬರ್ ಕ್ರೈಂ, ಡಾರ್ಕ್ ವೆಬ್ ಅಪರಾಧ ಚಟುವಟಿಕೆ, ಡ್ರಗ್ ವಹಿವಾಟು ನಿಯಂತ್ರಣಕ್ಕೆ ನಮ್ಮ ಪೊಲೀಸ್ ಪಡೆ ಸದೃಢವಾಗಬೇಕು. ತಂತ್ರಜ್ಞಾನ ಬಳಕೆಯನ್ನು ಹೆಚ್ಚೆಚ್ಚು ಮಾಡಿಕೊಳ್ಳಬೇಕು. ಆನ್‍ಲೈನ್ ಪ್ಲಾಟ್ ಫಾರಂ ಅಡಿ ಹೊಸ ತಂತ್ರಜ್ಞಾನ ಬಳಕೆ ಮಾಡಲು ಮುಖ್ಯಮಂತ್ರಿ ಅನುಮೋದನೆ ಕೊಟ್ಟಿದ್ದು, ತಂತ್ರಜ್ಞಾನ ಬದಲಾದಂತೆ ನಮ್ಮ ಇಲಾಖೆಯನ್ನು ಸಜ್ಜುಗೊಳಿಸಬೇಕಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ರಿಝ್ವಾನ್ ಅರ್ಶದ್, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.




.jpg)
.jpg)

