ಪುಸ್ತಕ ಪ್ರಾಧಿಕಾರದಿಂದ ಪುಸ್ತಕ ಸೊಗಸು, ವಿನ್ಯಾಸ ಬಹುಮಾನ ಪ್ರಕಟ
ಭವತಾರಣಿ ಪ್ರಕಾಶನಕ್ಕೆ ಪುಸ್ತಕ ಸೊಗಸು ಪ್ರಥಮ ಬಹುಮಾನ ► ಕಲಾವಿದ ಹಾದಿಮನಿಗೆ ಮುಖಪುಟ ಚಿತ್ರ ವಿನ್ಯಾಸ ಬಹುಮಾನ
ಬೆಂಗಳೂರು, ಜು.13: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2020ನೇ ಸಾಲಿನ ಪುಸ್ತಕ ಸೊಗಸಿಗೆ, ಮುಖಪುಟ ಚಿತ್ರ ಕಲೆ ವಿನ್ಯಾಸಕ್ಕೆ, ಮುಖಪುಟ ಚಿತ್ರಕಲೆಗೆ, ಪುಸ್ತಕ ಮುದ್ರಣಕ್ಕೆ ಬಹುಮಾನ ಪ್ರಕಟವಾಗಿದೆ.
ಪುಸ್ತಕ ಸೊಗಸು ಮೊದಲನೇ ಬಹುಮಾನವು 25ಸಾವಿರ ರೂ.ಆಗಿದ್ದು, ಬೆಂಗಳೂರಿನ ಭವತಾರಿಣಿ ಪ್ರಕಾಶನ ಸಂಸ್ಥೆಯ ಕದಂಬರ ಸಮಗ್ರ ಅವಲೋಕನ(ಲೇ: ಎಸ್.ಗುರುಮೂರ್ತಿ) ಕೃತಿಗೆ ಸಿಕ್ಕಿದೆ. ಎರಡನೇ ಬಹುಮಾನ 20ಸಾವಿರ ರೂ.ಆಗಿದ್ದು, ನ್ಯಾ.ಶಿವರಾಜ ವಿ.ಪಾಟೀಲ ಪ್ರತಿಷ್ಠಾನದ ಸಾರ್ಥಕ ಬದುಕು(ಲೇ: ಡಾ.ಅಮರೇಶ ಯತಗಲ್) ಕೃತಿಗೆ ಸಿಕ್ಕಿದೆ. ಹಾಗೂ ಮೂರನೇ ಬಹುಮಾನವು 10ಸಾವಿರ ರೂ.ಆಗಿದ್ದು, ಉಡುಪಿಯ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್‍ನಿಂದ ಪ್ರಕಟಿಸಿರುವ ಕಲಾ ಸಂಚಯ(ಲೇ: ತಲ್ಲೂರು ಶಿವರಾಮ ಶೆಟ್ಟಿ) ಕೃತಿಗೆ ಸಂದಿದೆ. ಮಕ್ಕಳ ಪುಸ್ತಕ ಸೊಗಸು ಬಹುಮಾನವು 8ಸಾವಿರ ರೂ.ಆಗಿದ್ದು, ತುಮಕೂರಿನ ಗೋಮಿನಿ ಪ್ರಕಾಶನದ ಫ್ರಾಗಿ ಮತ್ತು ಗೆಳೆಯರು(ಲೇ: ತಮ್ಮಣ್ಣ ಬೀಗಾರ) ಕೃತಿ ಆಯ್ಕೆಯಾಗಿದೆ.
ಮುಖಪುಟ ಚಿತ್ರ ವಿನ್ಯಾಸ ಬಹುಮಾನವು 10ಸಾವಿರ ರೂ.ಆಗಿದ್ದು, ಬಯಲೊಳಗೆ ಬಯಲಾಗಿ ಕೃತಿಗೆ ಚಿತ್ರ ವಿನ್ಯಾಸ ಮಾಡಿದ ಮೈಸೂರಿನ ಹಾದಿಮನಿ ಟಿ.ಎಫ್.ಆಯ್ಕೆಯಾಗಿದ್ದಾರೆ. ಮುಖಪುಟ ಚಿತ್ರ ಕಲೆಯ ಬಹುಮಾನವು 8ಸಾವಿರ ರೂ.ಆಗಿದ್ದು, ಲೇಖಕಿ ರೂಪ ಹಾಸನರವರ ಹೆಣ್ಣೊಳನೋಟ ಕೃತಿಗೆ ವಿನ್ಯಾಸ ಮಾಡಿರುವ ಸುಧಾಕಾರ ದರ್ಬೆ ಆಯ್ಕೆಯಾಗಿದ್ದಾರೆ. ಹಾಗೂ ಪುಸ್ತಕ ಮುದ್ರಣ ಸೊಗಸು ಬಹುಮಾನವು 5ಸಾವಿರ ರೂ.ಆಗಿದ್ದು, ಲೇಖಕ ಕಿರಣ್ ಭಟ್‍ರವರ ರಂಗ ಕೈರಳಿ ಕೃತಿಯ ಮುದ್ರಣ ಮಾಡಿದ ರೀಗಲ್ ಪ್ರಿಂಟ್ ಸರ್ವೀಸ್ ಆಯ್ಕೆಯಾಗಿದೆ ಎಂದು ಪುಸ್ತಕ ಪ್ರಾಧಿಕಾರ ಪ್ರಕಟನೆಯಲ್ಲಿ ತಿಳಿಸಿದೆ.





