ಚಿಕ್ಕಮಗಳೂರು: ನಗರಸಭೆ, ಸಿಡಿಎ ಜಂಟಿ ಕಾರ್ಯಾಚರಣೆ; ಒತ್ತುವರಿ ಜಾಗ ತೆರವು

ಚಿಕ್ಕಮಗಳೂರು, ಜು.13: ನಗರದ ಕಲ್ಯಾಣನಗರ ಲೇಔಟ್ ಸೇರಿದಂತೆ ವಿವಿಧೆಡೆ ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿ ತಂತಿ ಬೇಲಿ ನಿರ್ಮಿಸಿಕೊಂಡು ವಾಹನಗಳ ಶೆಡ್‍ಗಳನ್ನು ನಿರ್ಮಿಸಿಕೊಂಡಿದ್ದ ಸರಕಾರಿ ಜಾಗವನ್ನು ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸೋಮವಾರ ಬೆಳಂಬೆಳಗ್ಗೆ ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.
ಈ ಸಂಬಂಧ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿ.ಆನಂದ್ ಮಾತನಾಡಿ, ನಗರಾಭಿವೃದ್ದಿ ಪ್ರಾಧಿಕಾರ ಅಥವಾ ನಗರಸಭೆ ವ್ಯಾಪ್ತಿಗೆ ಸೇರಿದ ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿ ಆ ಜಾಗದಲ್ಲಿ ಗಿಡ-ಗಂಟಿಗಳನ್ನು ಬೆಳೆಸಿದ್ದ, ವಾಹನಶೆಡ್‍ಗಳನ್ನು ಮಾಡಿಕೊಂಡಿದ್ದರಿಂದ ವಾಹನಗಳು ಹಾಗೂ ಜನರ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ಬಗ್ಗೆ ದೂರುಗಳು ಕೇಳಿಬಂದಿದ್ದವು. ಆದ್ದರಿಂದ ರಸ್ತೆ ಒತ್ತುವರಿ ಮಾಡಿದ ಮನೆ ಮಾಲಕರಿಗೆ ತಿಳುವಳಿಕೆ ನೋಟಿಸ್ ನೀಡಿ ತೆರವಿಗೆ ಕಾಲವಕಾಶ ನೀಡಲಾಗಿತ್ತು. ಆದರೆ ತೆರವುಗೊಳಿಸದ ಹಿನ್ನಲೆಯಲ್ಲಿ ಸೋಮವಾರ ನಗರಸಭೆ ಹಾಗೂ ಸಿಡಿಎ ಜಂಟಿಯಾಗಿ ತೆರವು ಕಾರ್ಯಕ್ಕೆ ಮುಂದಾಗಿದೆ ಎಂದು ತಿಳಿಸಿದರು.
ಪರಸರ ಕಾಳಜಿ ಎಂಬುದು ಪ್ರತಿಯೊಬ್ಬರಲ್ಲಿಯೂ ಇರಬೇಕು. ಆದರೆ ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿಕೊಂಡು ವಾಹನಗಳು, ಜನರು ಸಂಚರಿಸುವ ಜಾಗಕ್ಕೆ ಗಿಡಗಳನ್ನು ಬೆಳೆಸುವುದರಿಂದ ಸಂಚಾರಕ್ಕೆ ತೊಂದರೆಯಾಗಲಿದೆ. ಈ ಬಗ್ಗೆ ವಕೀಲರೊಬ್ಬರು ಪಿಐಎಲ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಕೂಡ ಸಾರ್ವಜನಿಕ ರಸ್ತೆಯನ್ನು ತೆರವುಗೊಳಿಸುವಂತೆ ಪ್ರಾಧಿಕಾರಕ್ಕೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಲ್ಯಾಣ ನಗರ ಬಡಾವಣೆಯಲ್ಲಿ ತೆರವು ಕಾರ್ಯ ನಡೆಸಲಾಗಿದೆ ಎಂದ ಅವರು, ಸಾರ್ವಜನಿಕ ರಸ್ತೆ, ಉದ್ಯಾನವನಗಳನ್ನು ಅನಧೀಕೃತವಾಗಿ ಒತ್ತುವರಿ ಮಾಡುವುದು ಅಪರಾಧ. ಈ ಬಗ್ಗೆ ಮನೆ ಮಾಲಕರು ಎಚ್ಚರಿಕೆ ವಹಿಸಬೇಕು. ಒತ್ತುವರಿಯಾಗಿದ್ದಲ್ಲಿ ಸ್ವಯಂ ಪ್ರೇರಿತವಾಗಿ ತೆರವು ಮಾಡಿಕೊಳ್ಳುವಂತೆ ತಿಳಿಸಿದರು.
ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ, ಕಳೆದ 6 ತಿಂಗಳ ಹಿಂದೆ ಪ್ರಾಧಿಕಾರದ ಜಾಗ ಒತ್ತುವರಿಯಾಗಿರುವ ಮಾಹಿತಿ ಹಿನ್ನೆಲೆಯಲ್ಲಿ ಮನೆ ಮಾಲಕರಿಗೆ ತಿಳುವಳಿಕೆ ನೋಟಿಸ್ ನೀಡಲಾಗಿತ್ತು. ಆದಾಗ್ಯೂ ಕೆಲವು ಮಂದಿ ಉಡಾಫೆಯಿಂದ ಜಾಗವನ್ನು ತೆರವು ಮಾಡಿರಲಿಲ್ಲ, ಆದ್ದರಿಂದ ನ್ಯಾಯಾಲಯದ ನಿರ್ದೇಶನದಂತೆ ಸೋಮವಾರ ಒತ್ತುವರಿ ಜಾಗವನ್ನು ನಗರಸಭೆ ಹಾಗೂ ನಗರಾಭಿವೃದ್ದಿ ಪ್ರಾಧಿಕಾರ ಜಂಟಿ ಕಾರ್ಯಾಚರಣೆ ಮೂಲಕ ತೆರವುಗೊಳಿಸುವ ಕಾರ್ಯಕ್ಕೆ ನಡೆಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರ ಯೋಜನಾ ಸಹಾಯಕ ನಿರ್ದೇಶಕ ಶಿವಕುಮಾರ್, ಸಹಾಯಕ ನಗರ ಯೋಜಕ ಸಂತೋಷ್, ನಗರಸಭೆ ಅಭಿಯಂತರ ಚಂದನ್, ಕಂದಾಯಾಧಿಕಾರಿ ಬಸವರಾಜ್, ಸ್ಯಾನಿಟೈಸರಿ ಸೂಪರ್‍ವೈಸರ್ ಅಣ್ಣಯ್ಯ, ಆರ್ ಐ ಈಶ್ವರ್, ಶಿವಾನಂದಪ್ಪ, ವೆಂಕಟೇಶ್, ಶಶಿಪ್ರಸಾದ್, ವಿವೇಕ್, ಸತೀಶ್ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.





