ಕಳೆದ ಚುನಾವಣೆಯಲ್ಲಿ ನಿಖಿಲ್ ಸೋಲಿಗೆ ಹೆಚ್.ಡಿ. ರೇವಣ್ಣ ಅವರೇ ಕಾರಣ: ಎ. ಮಂಜು ಆರೋಪ
"ಕಾಂಗ್ರೆಸ್ ಸೇರುವ ಚಿಂತನೆ ಇಲ್ಲ"

ಹಾಸನ: ಕಳೆದ ಚುನಾವಣೆಯಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ಮಾತನಾಡಿ ನಿಖಿಲ್ ಕುಮಾರಸ್ವಾಮಿಗೆ ಸೋಲಿಗೆ ಕಾರಣರಾದರು. ಈಗ ಮಗನ ಭವಿಷ್ಯವನ್ನು ಇವರೆ ಹಾಳು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸೇರುವ ಚಿಂತನೆ ಇರುವುದಿಲ್ಲ ಎಂದು ಮಾಜಿ ಸಚಿವ ಎ. ಮಂಜು ತಿಳಿಸಿದರು.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿಗಳಾಗಿ ಅಧಿಕಾರ ಅನುಭವಿಸಿದವರು ತಮ್ಮ ಮಾತಿನ ಪದ ಬಳಕೆ ಮಾಡುವ ವಿಚಾರದಲ್ಲಿ ಯೋಚನೆ ಮಾಡಿ ಮಾತನಾಡಬೇಕು. ಸಂಸದರಾದವರು ತಮ್ಮ ಕ್ಷೇತ್ರದ ಆಗುಹೋಗುಗಳ ಬಗ್ಗೆ ಮಾತನಾಡುವುದು ಸಹಜ. ಚುನಾಯಿತರಾದ ಪ್ರತಿನಿಧಿಗಳಿಗೆ ಮಾತಿನ ಮೂಲಕ ಗೌರವ ಕೊಡಬೇಕು. ಏನೇ ತಪ್ಪು ಇದ್ದರೂ ಕಾನೂನಿನ ಮೂಲಕ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಕಳೆದ ಚುನಾವಣೆಯಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣನವರು ಮಾತನಾಡಿ, ನಿಖಿಲ್ ಸೋಲು ಅನುಭವಿಸಲು ಕಾರಣರಾದರು. ಇವರ ಮಾತಿನ ಮೂಲಕ ತಮ್ಮ ಪುತ್ರನ ಭವಿಷ್ಯವನ್ನೂ ಹಾಳು ಮಾಡುತ್ತಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಿರಿಯರಾಗಿದ್ದು, ಹೆಚ್.ಡಿ. ಕುಮಾರಸ್ವಾಮಿ ಮತ್ತು ಸುಮಲತಾ ಇವರನ್ನು ಕರೆದು ಮಾತನಾಡಿ. ಇನ್ನು ಸಮುದಾಯದ ಸ್ವಾಮೀಜಿಗಳನ್ನು ಕೂಡ ಕರೆದು ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ವಿಚಾರದಲ್ಲಿ ಸಣ್ಣ-ಪುಟ್ಟ ತಪ್ಪುಗಳು ಆಗುತ್ತದೆ. ಕೆಲವರು ತಮ್ಮ ಅನುಕೂಲಕ್ಕಾಗಿ ಸಂಸದರ ಪರವಾಗಿ, ಕುಮಾರಸ್ವಾಮಿ ಪರ ಮಾತನಾಡಬಹುದು. ಕೆ.ಆರ್.ಎಸ್. ಬಿರುಕು ಬಿಟ್ಟಿರುವುದು ಕಂಡು ಬಂದರೇ ಕಾನೂನಿನ ಪ್ರಕಾರ ಸರಕಾರವು ಮುಂದಿನ ತೀರ್ಮಾಣಕೈಗೊಳ್ಳಲಿದೆ ಎಂದು ಇದೆ ವೇಳೆ ಹೇಳಿದರು.
ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರುವ ಬಗ್ಗೆ ನಾನು ಏನೂ ಚಿಂತನೆ ಮಾಡಿರುವುದಿಲ್ಲ. ನಾನು ಈಗಲು ಬಿಜೆಪಿಯಲ್ಲಿಯೇ ಇದ್ದೇನೆ. ಈಗ ನಮ್ಮ ಸರ್ಕಾರ ಇದೆ. ಮೋದಿಯವರ ನಾಯತ್ವ ಇದೆ ನಾನು ಪಕ್ಷದಲ್ಲೇ ಇರುತ್ತೇನೆ.
ನಮ್ಮ ಬೆಂಬಲಿಗರು ಕಾಂಗ್ರೆಸ್ ಸೇರಬೇಕೆಂದು ಕೇಳುತ್ತಿರುವ ಬಗ್ಗೆ ನನಗೆ ಗೊತ್ತಿಲ್ಲ. ಆದರೇ ಮಾಧ್ಯಮಗಳಿಂದ ಇಂದು ಗೊತ್ತಾಗಿದೆ. ಅವರು ಒತ್ತಾಯ ಮಾಡಿದ್ರೆ ತೀರ್ಮಾನ ಮಾಡಬೇಕಿರೋದು ನಾನಲ್ಲವೇ? ನನ್ನ ಪರವಾಗಿ ಯಾರು ಬೇಕಾದರೂ ಮಾತಾಡಬಹುದು ಆದರೆ ತೀರ್ಮಾನ ಮಾಡುವುದು ಬಿಡುವುದು ನಾನಲ್ಲವೇ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ನಾನು ಹಿಂದೆ ಬಿಜೆಪಿ ಸೇರಿದಾಗ ಯಾರನ್ನು ನನ್ನೊಟ್ಟಿಗೆ ಕರೆದೊಯ್ಯಲಿಲ್ಲ. ಮುಂದಿನ ಚುನಾವಣೆ ಬಗ್ಗೆಯು ಇನ್ನೂ ತೀರ್ಮಾನ ಮಾಡಿಲ್ಲ. ಈ ಕೊರೊನ ಮೂರನೇ ಅಲೆಯಿಂದ ಮೊದಲು ಬದಕುಳಿಯೋಣ ಆಮೇಲೆ ಮುಂದಿನ ಯೋಚನೆ ಮಾಡೋಣ ಎಂದ ಅವರು, ಕಾಂಗ್ರೆಸ್ ಸೇರುವ ಬಗ್ಗೆ ನಡೆಯುತ್ತಿರುವ ಚರ್ಚೆ ಸುಳ್ಳು ಎಂದು ವಿವಾದಕ್ಕೆ ತೆರೆ ಎಳೆದರು. ಕೊರೋನ ಆವರಿಸಿ ಅನೇಕರು ಸಾವನಪ್ಪಿದ್ದಾರೆ. ಈವೇಳೆ ಯಾರು ಬದುಕುಳಿಯುತ್ತಾರೋ ಗೊತ್ತಿಲ್ಲ. ಬೆಳಿಗ್ಗೆ ಇದ್ದವರು ನಾಳೆ ಇಲ್ಲ, ನಾಳೆ ಇದ್ದವರು ನಾಡಿದ್ದು ಇರಲ್ಲ. ಈಗಿರುವಾಗ ಬೇಡವಾದ ಯೋಚನೆಗಳು ನನ್ನಲ್ಲಿ ಇರುವುದಿಲ್ಲ ಎಂದು ಹೇಳಿದರು.







