ಕಾಪಿರೈಟ್ ಉಲ್ಲಂಘನೆ: ಫ್ರಾನ್ಸ್ ನಿಂದ ಗೂಗಲ್ ಗೆ 500 ಮಿಲಿಯ ಯುರೋ ದಂಡ

ಪ್ಯಾರಿಸ್ (ಫ್ರಾನ್ಸ್), ಜು. 13: ಮಾಧ್ಯಮ ಕಂಪೆನಿಗಳ ಸುದ್ದಿಗಳನ್ನು ಬಳಸುವ ವಿಷಯದಲ್ಲಿ ಐರೋಪ್ಯ ಒಕ್ಕೂಟದ ಕಾಪಿರೈಟ್ ನಿಯಮಗಳಂತೆ ಅವುಗಳೊಂದಿಗೆ ‘ಉತ್ತಮ ನಂಬಿಕೆಯೊಂದಿಗೆ’ ಮಾತುಕತೆ ನಡೆಸಲು ವಿಫಲವಾಗಿರುವುದಕ್ಕಾಗಿ ಫ್ರಾನ್ಸ್ನ ಏಕಸ್ವಾಮ್ಯ ನಿಗ್ರಹ ಇಲಾಖೆಯು ಗೂಗಲ್ಗೆ ಮಂಗಳವಾರ 500 ಮಿಲಿಯ ಯುರೋ ದಂಡ ವಿಧಿಸಿದೆ.
ಇದು ತನ್ನ ನಿಯಮಗಳ ಉಲ್ಲಂಘನೆಗಾಗಿ ಏಕಸ್ವಾಮ್ಯ ನಿಗ್ರಹ ಇಲಾಖೆಯು ಕಂಪೆನಿಯೊಂದರ ಮೇಲೆ ವಿಧಿಸಿದರು ಈವರೆಗಿನ ಅತ್ಯಧಿಕ ದಂಡವಾಗಿದೆ ಎಂದು ಇಲಾಖೆಯ ಮುಖ್ಯಸ್ಥೆ ಇಸಾಬೆಲ್ ಡಿ ಸಿಲ್ವ ಸುದ್ದಿಗಾರರಿಗೆ ತಿಳಿಸಿದರು.
ಅದೂ ಅಲ್ಲದೆ, ಮಾಧ್ಯಮ ಸಂಸ್ಥೆಗಳ ಕಾಪಿರೈಟ್ಗೆ ಒಳಗಾಗಿರುವ ಸುದ್ದಿಗಳನ್ನು ಬಳಸುತ್ತಿರುವುದಕ್ಕಾಗಿ ಆ ಸಂಸ್ಥೆಗಳಿಗೆ ಸಂಭಾವನೆಯನ್ನು ನೀಡುವಂತೆಯೂ ಇಲಾಖೆಯು ಅಮೆರಿಕದ ಇಂಟರ್ನೆಟ್ ಕಂಪೆನಿಗೆ ಆದೇಶಿಸಿದೆ. ಇಲ್ಲದಿದ್ದರೆ ದಿನವೊಂದಕ್ಕೆ 9 ಲಕ್ಷ ಯುರೋ ಹೆಚ್ಚುವರಿ ದಂಡ ಪಾವತಿಸಲು ಸಿದ್ಧವಾಗಿರುವಂತೆಯೂ ಅದು ಹೇಳಿದೆ.
ಈ ನಿರ್ಧಾರದಿಂದ ತುಂಬಾ ನಿರಾಶೆಯಾಗಿದೆ ಎಂದು ಗೂಗಲ್ ವಕ್ತಾರರೊಬ್ಬರು ಎಎಫ್ಪಿ ಸುದ್ದಿ ಸಂಸ್ಥೆಗೆ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.





