ಭಯೋತ್ಪಾದನೆ, ದೇಶದ್ರೋಹ ಆರೋಪ: ವೆನೆಝುವೆಲಾದ ಪ್ರಮುಖ ರಾಜಕಾರಣಿ ಫ್ರೆಡ್ಡಿ ಗುವೆರಾ ಬಂಧನ
ಕರಕಾಸ್, ಜು.13: ಭಯೋತ್ಪಾದನೆ ಮತ್ತು ದೇಶದ್ರೋಹ ಆರೋಪದಲ್ಲಿ ವೆನೆಝುವೆಲಾದ ಪ್ರಮುಖ ರಾಜಕಾರಣಿ, ವಿಪಕ್ಷ ಮುಖಂಡರ ನಿಕಟವರ್ತಿ ಫ್ರೆಡ್ಡಿ ಗುವೆರಾರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಉಗ್ರಗಾಮಿಗಳೊಂದಿಗೆ ಮತ್ತು ಕೊಲಂಬಿಯಾ ಸರಕಾರ ಬೆಂಬಲಿತ ಅರೆಸೇನಾ ಪಡೆಯೊಂದಿಗೆ ಗುವೆರಾ ಸಂಪರ್ಕ ಹೊಂದಿರುವ ಬಗ್ಗೆ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ.
ಗುವೆರಾ ವಿರುದ್ಧ ಭಯೋತ್ಪಾದನೆ ಕೃತ್ಯ, ಸಾಂವಿಧಾನಿಕ ವ್ಯವಸ್ಥೆಯ ವಿರುದ್ಧ ದಾಳಿ ನಡೆಸಿರುವುದು ಹಾಗೂ ದೇಶದ್ರೋಹದ ಪ್ರಕರಣ ದಾಖಲಿಸಲಾಗುವುದು ಎಂದು ಅಟಾರ್ನಿ ಜನರಲ್ ಹೇಳಿರುವುದಾಗಿ ವರದಿಯಾಗಿದೆ. ಗುವೆರಾ ವೆನೆಝುವೆಲಾದ ವಿಪಕ್ಷ ಮುಖಂಡ ಜುವಾನ್ ಗುಯಾಡೊ ಅವರ ನಿಕಟವರ್ತಿಯಾಗಿದ್ದಾರೆ. ಕರಕಾಸ್ ಹೆದ್ದಾರಿಯಲ್ಲಿ ಕಾರಿನಲ್ಲಿ ಸಾಗುತ್ತಿದ್ದ ತನ್ನನ್ನು ಗುಪ್ತಚರ ಪೊಲೀಸರು ಬಂಧಿಸಿದ್ದಾರೆ ಎಂದು ಕುಟುಂಬದ ಸದಸ್ಯರನ್ನುದ್ದೇಶಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಗುವೆರಾ, ಹೀಗಾಗಿದ್ದಕ್ಕೆ ಬೇಸರವಾಗಿದೆ. ಆದರೆ ಈ ಪರಿಸ್ಥಿತಿ ಹೆಚ್ಚು ಸಮಯ ಇರುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಗುವೆರಾರನ್ನು ಕರಕಾಸ್ನ ಜೈಲಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ಗುಯಾಡೊ ಅವರ ಕಚೇರಿಯ ವಕ್ತಾರರು ಹೇಳಿದ್ದಾರೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದ ಆರೋಪದಿಂದ ಗುವೆರಾ 2017ರಲ್ಲಿ ಖುಲಾಸೆಗೊಂಡಿದ್ದರು. ಈ ಮಧ್ಯೆ, ಸೋಮವಾರ ಇಬ್ಬರು ಸಶಸ್ತ್ರಧಾರಿ ಅಪರಿಚಿತರು ತನ್ನನ್ನು ಬಂಧಿಸುವ ಬೆದರಿಕೆ ಒಡ್ಡಿದ್ದಾರೆ ಎಂದು ಗುಯಾಡೊ ಹೇಳಿದ್ದಾರೆ.
ಗುವೆರಾಗೆ ನೆರವಾಗುವ ಉದ್ದೇಶದಿಂದ ಮನೆಯಿಂದ ಹೊರತೆರಳಲು ಅನುವಾಗುತ್ತಿದ್ದಂತೆ ಆಗಮಿಸಿದ ಇಬ್ಬರು ಸಶಸ್ತ್ರಧಾರಿಗಳು, ತನ್ನತ್ತ ಬಂದೂಕು ಗುರಿಯಿರಿಸಿ ಬಂಧನದ ಬೆದರಿಕೆ ಒಡ್ಡಿದ್ದಾರೆ ಎಂದು ಗುಯಾಡೊ ಆರೋಪಿಸಿದ್ದು , ಈ ಘಟನೆಯ ವೀಡಿಯೊವನ್ನು ಅವರ ಕಚೇರಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದೆ. ಕಾರು ಚಾಲಕನ ಬಳಿಯಿದ್ದ ಬಾಗಿಲನ್ನು ತೆರೆದ ವ್ಯಕ್ತಿಯೊಬ್ಬ , ಚಾಲಕನನ್ನು ನೆಲಕ್ಕೆ ಕೆಡವಿ ‘ ಹೊರಗೆ ಬಾ’ ಎಂದು ಗದರಿಸುವ ದೃಶ್ಯ ಇದಾಗಿದೆ. ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ವೆನೆಝುವೆಲಾದ ಮಾಹಿತಿ ಸಚಿವಾಲಯ ನಿರಾಕರಿಸಿದೆ ಎಂದು ವರದಿಯಾಗಿದೆ.







