ಬ್ಯಾಡ್ಮಿಂಟನ್ ಪಂದ್ಯಾವಳಿ: ಆತಿಥೇಯ ತುಳುಕೂಟ ಕತರ್ ಚಾಂಪಿಯನ್

ಉಡುಪಿ, ಜು.13: ತುಳುಕೂಟ ಕತರ್ ವತಿಯಿಂದ ಕೇಂಬ್ರಿಡ್ಜ್ ಶಾಲೆಯಲ್ಲಿ ಜು.9ರಂದು ಏರ್ಪಡಿಸಲಾದ ಇಂಟರ್‌ಆರ್ಗನೈಸೇಶನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಆತಿಥೇಯ ತುಳುಕೂಟ ಕತರ್ ತಂಡವು ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ತುಳುಕೂಟ 120 ಅಂಕಗಳೊಂದಿಗೆ ಪ್ರಪ್ರಥಮ ಚಾಂಪಿಯನ್‌ಶಿಪ್ ಟ್ರೋಫಿ ಪಡೆದರೆ, ಕಳೆದ ಬಾರಿಯ ಚಾಂಪಿಯನ್ ಎಂಸಿಸಿ ತಂಡವು 35 ಅಂಕ ಗಳೊಂದಿಗೆ ರನ್ನರ್ಸ್ ಆಪ್ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಎರಡು ದಿನಗಳ ಪಂದ್ಯಾವಳಿಯಲ್ಲಿ ಕರ್ನಾಟಕ ಮೂಲದ ಕೆಎಸ್‌ಕ್ಯೂ, ಕೆಎಂಸಿಎ, ಕೆಎಂಸಿಎ, ಎಸ್‌ಕೆಎಂಡಬ್ಲ್ಯೂಎ, ಎಂಸಿಸಿ, ಬಂಟ್ಸ್ ಕತಾರ್, ಎಂಸಿಎ, ಕತಾರ್ ಬಿಲ್ಲವಾಸ್ ಮತ್ತು ಆತಿಥೇಯ ತುಳುಕೂಟ ಕತಾರ್ ತಂಡಗಳು ಭಾಗವಹಿಸಿದ್ದವು. ಈ ಪಂದ್ಯಾಟದಲ್ಲಿ ಸಣ್ಣ ಮಕ್ಕಳಿಂದ ಹಿಡಿದು 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರ ವಿಭಾಗದಲ್ಲಿ ಒಟ್ಟು 105 ಆಟಗಾರರು ಭಾಗವಹಿಸಿದ್ದರು.
ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಭಾರತೀಯ ಕ್ರೀಡಾಕೂಟದ ಅಧ್ಯಕ್ಷ ಡಾ.ಮೋಹನ್ ಥಾಮಸ್ ಚಾಂಪಿಯನ್‌ಶಿಪ್ ಟ್ರೋಫಿ ಯನ್ನು ವಿಜೇತ ತಂಡ ತುಳುಕೂಟ ಕತರ್‌ಗೆ ನೀಡಿದರು. ಈ ಸಂದರ್ಭದಲ್ಲಿ ಐಸಿಬಿಎಫ್ ಮತ್ತು ಐಎಸ್‌ಸಿಯ ಎಂಸಿ ಸದಸ್ಯ ಎಂ.ಪಲ್ಲಂಜಿ, ಕತಾರ್‌ನ ಜನರಲ್ ಮ್ಯಾನೇಜರ್ ಚಿದಾನಂದ್ ನಾಯಕ್ ಗೌರವ ಅತಿಥಿಗಳಾಗಿದ್ದರು.
ತುಳುಕೂಟದ ಅಧ್ಯಕ್ಷೆ ಚೈತಾಲಿ ಉದಯ್ ಶೆಟ್ಟಿ ಸ್ವಾಗತಿಸಿದರು. ತುಳುಕೂಟ ಕ್ರೀಡಾ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ ವಂದಿಸಿದರು.








