ಬುದ್ಧಿವಂತಿಕೆ ವಂಶ ಪಾರಂಪರ್ಯವಲ್ಲ: ಸಿದ್ದರಾಮಯ್ಯ

ಬಾಗಲಕೋಟೆ, ಜು.13: ಬುದ್ಧಿವಂತಿಕೆ ವಂಶ ಪಾರಂಪರ್ಯವಾಗಿ ಬರುವುದಿಲ್ಲ, ಅದನ್ನು ಬೆಳೆಸಿಕೊಳ್ಳಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಮಂಗಳವಾರ ಬಾದಾಮಿ ಪಟ್ಟಣದ ಸರಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿ ಮಾತನಾಡಿದ ಅವರು, ಬುದ್ಧಿವಂತಿಕೆ ಯಾರಪ್ಪನ ಮನೆ ಸ್ವತ್ತಲ್ಲ. ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಕುರಿ, ಎಮ್ಮೆ ಮೇಯಿಸು ಎಂದು ಕೆಲವರು ಹೇಳುತ್ತಿದ್ದರು. ಅವರ ಮಾತನ್ನೆ ಕೇಳಿದ್ದರೆ ಏನಾಗುತಿತ್ತು. ಜನ ಹೇಗೆ ದಾರಿ ತಪ್ಪಿಸುತ್ತಾರೆ ಎನ್ನುವುದಕ್ಕೆ ಇದೊಂದು ಸಾಕ್ಷಿ ಎಂದು ನುಡಿದರು.
ಕಾನೂನು ಓದು ಕುರುಬರಿಗೆ, ಶೂದ್ರರಿಗೆ ತಲೆಗೆ ಹತ್ತಲ್ಲಯ್ಯ. ಅದು ಮೇಲ್ಜಾತಿಯವರಿಗೆ ಮಾತ್ರ ಎಂದು ನಮ್ಮೂರಲ್ಲೊಬ್ಬ ಶಾನುಭೋಗ ನಮ್ಮಪ್ಪನಿಗೆ ಹೇಳಿದ್ದ. ಕೊನೆಗೆ ಊರಲ್ಲಿ ಪಂಚಾಯತ್ ಸೇರಿಸಿ ನಾನು ಕಾನೂನು ಕಾಲೇಜು ಸೇರಿಕೊಂಡಿದ್ದೆ.
ಅಷ್ಟೇ ಅಲ್ಲದೆ, ಆ ಶಾನುಭೋಗ ನೀನು, ನಿನ್ನ ಮಗನಿಗೆ ಕಾನೂನು ಪದವಿ ಓದಿಸಬೇಡ. ಪೋಲಿಯಾಗಿಬಿಡುತ್ತಾನೆ ಎಂದಿದ್ದ. ಅವನು ನನಗೆ ಕಲಿಯೋಕೆ ಬಿಡದೆ ನಮ್ಮಪ್ಪನಿಗೆ ಬರೀ ಸುಳ್ಳು ಹೇಳುತ್ತಿದ್ದ ಎಂದು ನೆನಪಿಸಿಕೊಂಡರು.
ನಾನು ವಿಧಾನಸಭೆ ವಿರೋಧ ಪಕ್ಷದ ನಾಯಕ ಆಗಿರುವುದರಿಂದ ಹೆಚ್ಚು ಓಡಾಟ ನಡೆಸಬೇಕಾಗುತ್ತದೆ. ಹೀಗಾಗಿ ಪದೇ ಪದೇ ಕ್ಷೇತ್ರಕ್ಕೆ ಬರಲು ಆಗುತ್ತಿಲ್ಲ ಎಂದ ಅವರು, ಬಾದಾಮಿ ಜನ ಒಳ್ಳೆಯ ಜನ ಎಂದು ಇಲ್ಲಿ ನಿಂತುಕೊಂಡೆ, ನೀವು ನನಗೆ ಗೆಲುವು ನೀಡಿದ್ದೀರಿ, ನಿಮ್ಮ ಋಣ ತೀರಿಸಬೇಕಲ್ಲ ಎಂದು ಹೇಳಿದರು.





