ಪ್ರತಿಪಕ್ಷ ಎಎಪಿ ಪಂಜಾಬ್‌ನಲ್ಲಿ ನನ್ನ ಕೆಲಸವನ್ನು ಗುರುತಿಸಿದೆ: ನವಜೋತ್ ಸಿಂಗ್ ಸಿಧು
ಪಕ್ಷದ ಹೈಕಮಾಂಡ್ ತನ್ನ ಬೇಡಿಕೆ ಈಡೇರಿಸದಿದ್ದರೆ ಪಕ್ಷಾಂತರವಾಗುವ ಪರೋಕ್ಷ ಸುಳಿವು ನೀಡಿದ ಮಾಜಿ ಕ್ರಿಕೆಟಿಗ

ಹೊಸದಿಲ್ಲಿ: ಆಮ್ ಆದ್ಮಿ ಪಕ್ಷವು(ಎಎಪಿ) ಪಂಜಾಬ್‌ಗಾಗಿ ನನ್ನ ಕೆಲಸವನ್ನು ಯಾವಾಗಲೂ ಗುರುತಿಸಿದೆ ಹಾಗೂ ರಾಜ್ಯಕ್ಕಾಗಿ ಯಾರು ಹೋರಾಡುತ್ತಿದ್ದಾರೆಂದು ಅದು ಚೆನ್ನಾಗಿ ತಿಳಿದಿದೆ ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಮಂಗಳವಾರ ಹೇಳಿದ್ದಾರೆ.
“ನಮ್ಮ ವಿಪಕ್ಷ ಎಎಪಿ ಯಾವಾಗಲೂ ನನ್ನ ದೂರದೃಷ್ಟಿ ಮತ್ತು ಪಂಜಾಬ್‌ನ ಕೆಲಸವನ್ನು ಗುರುತಿಸಿದೆ. 2017 ರ ಮೊದಲು ಪಂಜಾಬ್ ಜನತೆಯು ಡ್ರಗ್ಸ್, ರೈತರ ಸಮಸ್ಯೆಗಳು, ಭ್ರಷ್ಟಾಚಾರ ಹಾಗೂ ವಿದ್ಯುತ್ ಬಿಕ್ಕಟ್ಟು ಎದುರಿಸಿತ್ತು. ಆಗ ನಾನು ಆ ವಿಚಾರವನ್ನು ಎತ್ತಿದ್ದೆ. ಇಂದು ನಾನು “ಪಂಜಾಬ್ ಮಾದರಿ” ಯನ್ನು ಪ್ರಸ್ತುತಪಡಿಸುತ್ತಿರುವೆ. ಯಾರು ನಿಜವಾಗಿಯೂ ಪಂಜಾಬ್‌ಗಾಗಿ ಹೋರಾಡುತ್ತಿದ್ದಾರೆಯೋ ಅವರಿಗೆ ಇದು ಸ್ಪಷ್ಟವಾಗಿ ಗೊತ್ತಾಗುತ್ತದೆ ”ಎಂದು ಸಿಧು ಟ್ವೀಟ್ ವೊಂದರಲ್ಲಿ ಬರೆದಿದ್ದಾರೆ.
ನಮ್ಮ ವಿಪಕ್ಷಗಳು ನನ್ನನ್ನು ಹೊಗಳುತ್ತಿವೆ. ಆದರೆ ಇತರ ನಿಷ್ಟಾವಂತ ಕಾಂಗ್ರೆಸ್ಸಿಗರು, “ನೀವು ಎಎಪಿಗೆ ಪಕ್ಷಾಂತರವಾದರೆ ಒಳ್ಳೆಯದಾಗುತ್ತದೆ. ನೀವು ಕಾಂಗ್ರೆಸ್ ನಲ್ಲೆ ಇದ್ದರೆ ಕಷ್ಟವಾಗುತ್ತದೆ’’ಎಂದು ಹೇಳುತ್ತಿದ್ದಾರೆ ಎಂದು ಸಿಧು ತನ್ನ ಇನ್ನೊಂದು ಟ್ವೀಟ್ ನಲ್ಲಿ ಬರೆದಿದ್ದಾರೆ.
ಈ ಟ್ವೀಟ್ ಮೂಲಕ ಕಾಂಗ್ರೆಸ್ ಹೈಕಮಾಂಡ್ ಒಂದು ವೇಳೆ ನನ್ನ ಬೇಡಿಕೆಗಳನ್ನು ಈಡೇರಿಸದಿದ್ದರೆ ಎಎಪಿಗೆ ಪಕ್ಷಾಂತರವಾಗುವೆ ಎಂಬ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ಹಿಂದಿನ ಅಕಾಲಿದಳ ಹಾಗೂ ಬಿಜೆಪಿ ಆಡಳಿತದ ಅವಧಿಯಲ್ಲಿ ಮಾದಕ ದ್ರವ್ಯ ಮಾಫಿಯಾ ಹಾಗೂ “ಭ್ರಷ್ಟಾಚಾರ” ದಂತಹ ರಾಜ್ಯದ ಸಮಸ್ಯೆಗಳ ವಿರುದ್ಧ ಕಾಂಗ್ರೆಸ್ ನಾಯಕ ಸಿಧು ಹಾಗೂ ಅವರ ಪತ್ನಿ ಧ್ವನಿ ಎತ್ತಿದ್ದನ್ನು ಎಎಪಿ ನಾಯಕ ಸಂಜಯ್ ಸಿಂಗ್ ಅವರು ಶ್ಲಾಘಿಸುವ ವೀಡಿಯೊವೊಂದನ್ನು ಸಿಧು ಟ್ವೀಟ್ ಮಾಡಿದ್ದಾರೆ.
ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಪ್ರಿಯಾಂಕಾ ಗಾಂಧಿ, ಕೆ.ಸಿ.ವೇಣುಗೋಪಾಲ್ ಹಾಗೂ ಪಂಜಾಬ್ ವ್ಯವಹಾರಗಳ ಉಸ್ತುವಾರಿ ಹರೀಶ್ ರಾವತ್ ಅವರನ್ನು ಭೇಟಿಯಾದ ದಿನದಂದು ಸಿಧು ಅವರ ಈ ಟ್ವೀಟ್ ಬಂದಿದೆ.







