ದೊಡ್ಡ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಮಕ್ಕಳ ಚಿಕಿತ್ಸಾ ಕೊಠಡಿ ಪ್ರಾರಂಭಕ್ಕೆ ಸೂಚನೆ: ಗೌರವ್ ಗುಪ್ತಾ

ಬೆಂಗಳೂರು, ಜು.13: ಕೋವಿಡ್ ಮೂರನೇ ಅಲೆಯ ನಿಯಂತ್ರಣಕ್ಕೆ ಬಿಬಿಎಂಪಿ ವ್ಯಾಪ್ತಿಯ ದೊಡ್ಡ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಮಕ್ಕಳ ಚಿಕಿತ್ಸಾ ಕೊಠಡಿ ತೆರೆಯಲು ಸೂಚಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.
ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಪ್ರತಿಯೊಂದು ಆಸ್ಪತ್ರೆಯಲ್ಲೂ ಮಕ್ಕಳಿಗೆ ಬೇಕಾದ ವೈದ್ಯಕೀಯ ಸೌಲಭ್ಯ ಸಿದ್ಧಪಡಿಸಿಕೊಳ್ಳುವಂತೆ ಮೌಖಿಕ ಸೂಚನೆ ನೀಡಲಾಗಿದೆ ಎಂದರು.
ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೆ ಪಾಲನೆ ಮಾಡಿದರೆ, ಕೋವಿಡ್ ರೂಪಾಂತರ ತಳಿ ಎನ್ನುವ ಡೆಲ್ಟಾ ಅಥವಾ ಡೆಲ್ಟಾ ಪ್ಲಸ್ ಸೋಂಕಿಗೆ ನಾವು ಹೆದರುವ, ಭಯಪಡುವ ಅಗತ್ಯವಿಲ್ಲ. ಯಾವುದೇ ಸೋಂಕು ನಮಗೆ ಬರುವುದಿಲ್ಲ. ಈ ಬಗ್ಗೆ ಸಾರ್ವಜನಿಕರಿಗೆ ಆತ್ಮವಿಶ್ವಾಸ ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರ ಮತ್ತು ಕೇರಳದಲ್ಲಿ ದಿನೇ ದಿನೇ ಕೋವಿಡ್ ಸೋಂಕಿನ ಪ್ರಕರಣಗಳು ಮತ್ತೆ ಗಣನೀಯವಾಗಿ ಏರಿಕೆ ಆಗುತ್ತಿದೆ. ಈ ಸಂಬಂಧ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ಮತ್ತು ಪರೀಕ್ಷಾ ಪ್ರಮಾಣ ಏರಿಕೆ ಮಾಡಿ ವಿಶೇಷ ನಿಗಾ ಇಡಲಾಗಿದೆ. ನಗರದ ಮಹದೇವಪುರ ಮತ್ತು ದಕ್ಷಿಣ ವಲದಯಲ್ಲಿ ಕೊಂಚ ಮಟ್ಟಿಗೆ ಕೋವಿಡ್ ಸೋಂಕಿನ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆಂದು ಅವರು ಮಾಹಿತಿ ನೀಡಿದ್ದಾರೆ.





