ಪ್ರಣಾಳಿಕೆಯಲ್ಲಿ ದಲಿತ ಸಿಎಂ ಘೋಷಿಸಿ: ದಲಿತ ಸಂಘರ್ಷ ಸಮಿತಿ ಒತ್ತಾಯ
ಬೆಂಗಳೂರು, ಜು.13: ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್ ಪಕ್ಷಗಳು ದಲಿತ ಮುಖ್ಯಮಂತ್ರಿಯನ್ನು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಬೇಕೆಂದು ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ ಅವರು, ಕರ್ನಾಟಕದಲ್ಲಿ ಸ್ವಾತಂತ್ರ್ಯ ಬಂದನಂತರ 1947ರಿಂದ 2021ರವರೆಗೆ ಒಟ್ಟು 74 ವರ್ಷದಲ್ಲಿ ಮುಖ್ಯಯಾಗಿದ್ದ ಜಾತಿಗಳು, ಅವರ ಜನಸಂಖ್ಯೆ ಬಗ್ಗೆ ಕೆಳಕಂಡ ಮಾಹಿತಿಯನ್ನು ಗಮನಿಸಿದಾಗ ದಲಿತ, ಮುಸ್ಲಿಂ ಸಮುದಾಯದ ಯಾರೂ ಮುಖ್ಯಮಂತ್ರಿಗಳಾಗದೆ ಬಹಳ ಅನ್ಯಾಯವಾಗಿದೆ.
ಡಾ.ಅಂಬೇಡ್ಕರ್ ನಮಗೆ ಶೈಕ್ಷಣಿಕ, ಔದ್ಯೋಗಿಕ, ರಾಜಕೀಯದಲ್ಲಿ ಮೀಸಲಾತಿ ನೀಡಿದ್ದರೂ, 54 ಜನ ಶಾಸಕರು, 7 ಜನ ಸಂಸತ್ತು ಸದಸ್ಯರು, ಸಾವಿರಾರು ಐಎಎಸ್, ಐಪಿಎಸ್, ಮುಖ್ಯ ಇಂಜಿನಿಯರ್ ಅಧಿಕಾರಿಗಳು ಇದ್ದೂ, ಬೇರೆ ಜನಾಂಗದ ಸಂಘಟನೆಗಳಿಗಿಂತ ನೂರಾರು ದಲಿತ, ಬಂಡಾಯ ಸಂಘಟನೆಯ ಬಲವಿದ್ದೂ ಒಂದೇ ಒಂದು ವರ್ಷದ ಕಾಲ ಮುಖ್ಯಮಂತ್ರಿ ಪದವಿ ನಾವು ಗಳಿಸಲಿಲ್ಲ.
ಈ ಅಹಿಂದ ನಾಯಕರನ್ನು ನಾವೆಲ್ಲರೂ ಭೇಟಿಯಾಗಿ ಮಹನೀಯರೆ ಅಹಿಂದದಲ್ಲಿ ಹಿಂದುಳಿದ ತಾವು ಮುಖ್ಯಮಂತ್ರಿಯಾಗಿದ್ದೀರಿ ತಾವು ದಯಮಾಡಿ ಈ ಸಾರಿ ದಲಿತರಿಗೆ ಅಸ್ಪøಶ್ಯರಿಗೆ ಮುಖ್ಯಮಂತ್ರಿ ಮಾಡಿ ಎಂದು ನಮ್ಮ ಪರವಾಗಿ ಧ್ವನಿ ಎತ್ತೋಣ ಎಂದು ದಲಿತ ನಾಯಕದಲ್ಲಿ ಮನವಿ ಮಾಡಿದ್ದಾರೆ.
ದಯಮಾಡಿ ಎಲ್ಲ ದಲಿತರು ಆಲೋಚಿಸಿ, ನಾವು ಒಬ್ಬ ಸಣ್ಣಪುಟ್ಟ ಅಧಿಕಾರಕ್ಕಾಗಿ ಇಷ್ಟು ದಿನ ಹೋರಾಟ ಮಾಡಿದ್ದೇವೆ. ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ದಲಿತ ಮುಖ್ಯಮಂತ್ರಿ ಘೋಷಣೆ ಮಾಡುವ ಪಕ್ಷವನ್ನು ನಾವೆಲ್ಲರೂ ಸೇರಿ ಬೆಂಬಲಿಸೋಣ ಎಂದು ಅವರು ಕರೆ ನೀಡಿದರು.





