ರಾಜ್ಯಾದ್ಯಂತ ಮಳೆಯ ಆರ್ಭಟ: ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್

ಬೆಂಗಳೂರು, ಜು.13: ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದ್ದು, ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಂಗಳವಾರ ಈ ಕುರಿತು ಮಾಹಿತಿ ನೀಡಿದ ಹವಾಮಾನ ಇಲಾಖೆ ಪ್ರಾದೇಶಿಕ ನಿರ್ದೆಶಕ ಸಿ.ಎಸ್.ಪಾಟೀಲ್, ಉತ್ತರ ಆಂಧ್ರಪ್ರದೇಶ, ದಕ್ಷಿಣ ಒರಿಸ್ಸಾ ಪ್ರದೇಶದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರಿಂದ ಕರಾವಳಿ ಜಿಲ್ಲೆಗಳು, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ(ಜು.14) ನಾಲ್ಕು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಹೆಚ್ಚಿನ ನಿರೀಕ್ಷೆಯಿದೆ ಎಂದರು.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳ ಕೆಲವೆಡೆ ಅತಿ ಮಳೆಯಾಗುವ ಸಾಧ್ಯತೆಯಿದೆ. ಹಾಗಾಗಿ, ನಾಲ್ಕು ದಿನಗಳ ಆರೆಂಜ್ ಅಲರ್ಟ್ ಕೊಡಲಾಗಿದೆ. ಅದೇ ರೀತಿ, ಬೆಳಗಾವಿ, ಧಾರವಾಡ, ಹಾವೇರಿ, ಬೀದರ್, ಕಲಬುರ್ಗಿ, ಯಾದಗಿರಿ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಕೆಲವೆಡೆ ಭಾರೀ ಮಳೆಯನ್ನು ನಿರೀಕ್ಷಿಸಿದ್ದು, ಈ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇನ್ನು, ನೈರುತ್ಯ ಮುಂಗಾರು ಕರಾವಳಿಯಲ್ಲಿ ಸಕ್ರಿಯ, ಉತ್ತರ ಒಳನಾಡಿನಲ್ಲಿ ಸಹಜ ಹಾಗೂ ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ, ಉತ್ತರ ಒಳನಾಡಿನಲ್ಲಿ ವ್ಯಾಪಕ ಹಾಗೂ ದಕ್ಷಿಣ ಒಳನಾಡಿನಲ್ಲಿ ಬಹುತೇಕ ಎಲ್ಲ ಸ್ಥಳಗಳಲ್ಲಿ ಮಂಗಳವಾರ ಮಳೆಯಾಗಿದೆ.
ಮುಖ್ಯವಾಗಿ, ಉತ್ತರ ಕನ್ನಡ ಜಿಲ್ಲೆಯ ಮಂಕಿಯಲ್ಲಿ 9 ಸೆಂ.ಮೀ, ಮಂಗಳೂರಿನ ಪಣಂಬೂರಿನಲ್ಲಿ 8 ಸೆಂ.ಮೀ, ಸುಬ್ರಮಣ್ಯದಲ್ಲಿ 7 ಸೆಂ.ಮೀ. ಮಳೆಯಾಗಿದೆ ಎಂದು ಅವರು ವಿವರಿಸಿದರು.





