ಸುಲಿಗೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಬೆಂಗಳೂರು, ಜು.13: ಬೈಕ್ ಸವಾರರನ್ನು ಗುರಿಯಾಗಿಸಿಕೊಂಡು ಸುಲಿಗೆ ಮಾಡುತ್ತಿದ್ದ ಆರೋಪ ಪ್ರಕರಣ ಸಂಬಂಧ ಇಬ್ಬರನ್ನು ರಾಜಾಜಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಾಗಲೂರು ಕ್ರಾಸ್ ವಿನಾಯಕ ನಗರದ ಆಂತೋನಿ ಡಿಸಿಲ್ವಾ(24), ಅಟ್ಟೂರ್ ಲೇಔಟ್ ನಿವಾಸಿ ಸುಬ್ರಮಣ್ಯ(21) ಬಂಧಿತ ಆರೋಪಿಗಳಾಗಿದ್ದಾರೆಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
ಆರೋಪಿ ಆಂತೋನಿ ಡಿಸಿಲ್ವಾ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿದ್ದು, ಮಾ.24 ರಂದು ಜೈಲಿಗೆ ಹೋಗಿ 15 ದಿನಗಳ ನಂತರ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾನೆ.
ಈತನ ಬಂಧನದಿಂದ ಬಸವೇಶ್ವರನಗರ, ಯಲಹಂಕ ನ್ಯೂಟೌನ್ ತಲಾ ಒಂದು ದ್ವಿಚಕ್ರವಾಹನ ಕಳವು ಪ್ರಕರಣಗಳು ಪತ್ತೆಯಾಗಿದ್ದು, ಉಳಿದ 5 ದ್ವಿಚಕ್ರವಾಹನಗಳ ವಾರಸುದಾರರನ್ನು ಪತ್ತೆ ಮಾಡಬೇಕಾಗಿದೆ ಎಂದು ಡಿಸಿಪಿ ಹೇಳಿದರು.
ಒಟ್ಟಾರೆ, ಆರೋಪಿಗಳಿಂದ 4.15 ಲಕ್ಷ ಮೌಲ್ಯದ ಬಾಳುವ ವಿವಿಧ ಕಂಪೆನಿಯ 7 ದ್ವಿಚಕ್ರ ವಾಹನಗಳು, ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಮುಂದುವರೆಸಲಾಗಿದೆ ಎಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.





