ಮುಂದಿನ ವರ್ಷದೊಳಗೆ 5000 ಮಂದಿಗೆ ವೈಜ್ಞಾನಿಕ ಕೃಷಿ ತರಬೇತಿಯ ಗುರಿ: ರಾಮಕೃಷ್ಣ ಶರ್ಮ ಬಂಟಕಲ್ಲು

ಉಡುಪಿ, ಜು.13: ಕೃಷಿಯಲ್ಲಿ ವೈಜ್ಞಾನಿಕ ವಿಧಾನವನ್ನು ಅಳವಡಿಸಿಕೊಳ್ಳದಿ ರುವುದರಿಂದ ಅದು ಲಾಭದಾಯಕವಾಗಿಲ್ಲ. ಆದುದರಿಂದ ಮುಂದಿನ ವರ್ಷ ಜಿಲ್ಲೆಯಲ್ಲಿ ವೈಜ್ಞಾನಿಕ ಕೃಷಿ ವಿಧಾನ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ 5000 ಮಂದಿ ತರಬೇತಿ ನೀಡುವ ಗುರಿಯನ್ನು ಹೊಂದಲಾಗಿದೆ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮಾ ಬಂಟಕಲ್ಲು ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ಉಡುಪಿ ರೆಸಿಡೆನ್ಸಿ ಹೋಟೇಲಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು. ಕೃಷಿ ಲಾಭದಾಯಕ ಅಲ್ಲ ಎಂಬ ಭಾವನೆ ಎಲ್ಲರಲ್ಲೂ ಮೂಡುತ್ತಿದೆ. ಮುಖ್ಯವಾಗಿ ಜನರಿಗೆ ಲಾಭದಾಯಕ ಕೃಷಿ ಹೇಗೆ ಮಾಡಬೇಕು ಮಾಹಿತಿ ಕೊರತೆ ಕೂಡ ಇದೆ ಎಂದರು.
ಯೂರಿಯಾ, ಡಿಎಪಿ, ಸುಫಲ ರಾಸಾಯನಿಕ ಗೊಬ್ಬರವನ್ನು ಸರಕಾರ ನಿಷೇಧ ಮಡಬೇಕು. ಕೃಷಿಗೆ ರಾಸಾಯನಿಕ ಬಳಸಿದರೆ ಪ್ರಕೃತಿ ನಾಶದ ಜೊತೆ ನಾವೂ ನಾಶ ಆಗುತ್ತೇವೆ. ಶೇ99 ಸಾವಯವ ಕೃಷಿ ವಿಧಾನ ಅಳವಡಿಸಿಕೊಳ್ಳ ಬೇಕು. ಇದರಿಂದ ಶೇ.25ರಷ್ಟು ಖರ್ಚು ಮತ್ತು ಶೇ.75ರಷ್ಟು ಲಾಭ ಕೃಷಿಯಲ್ಲಿ ಗಳಿಸಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.
ವೈಜ್ಞಾನಿಕ ಕೃಷಿ ನಮ್ಮ ಮೊದಲ ಆದ್ಯತೆ ಅಗಬೇಕು. ಮನೆಮನೆಗಳಲ್ಲಿ ಕೃಷಿ ಕಾರ್ಯಕ್ರಮ ನಡೆಯಬೇಕು. ರೈತರನ್ನು ಸಂಘಟಿಸಲು ಗ್ರಾಮ ಮಟ್ಟದಲ್ಲಿ ಸಮಿತಿ ರಚಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಪರಿಸ್ಥಿತಿ ಬದಲಾವಣೆ ಆಗಬೇಕು. ಪರಸ್ಪರ ಸಹಕಾರ ಇರಬೇಕು. ಹೋರಾಟ-ಸಂಘಟನೆ- ವೈಜ್ಞಾನಿಕ ವಿಧಾನಕ್ಕೆ ಕೃಷಿಕರು ಪ್ರಾಧಾನ್ಯತೆ ಕೊಬೇಕು ಎಂದು ಅವರು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ ಮಲ್ಲಪಳ್ಳಿ ಸ್ವಾಗತಿಸಿದರು. ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಕಾರ್ಯಕ್ರಮ ನಿರೂಪಿಸಿದರು.







