ದ.ಕ. ಜಿಲ್ಲೆಯ ಎಲ್ಲಾ ಎ ದರ್ಜೆಯ ದೇವಸ್ಥಾನಗಳಲ್ಲಿ ಸಪ್ತಪದಿ ವಿವಾಹ ನಡೆಸಿ: ಸಚಿವ ಕೋಟ ಮನವಿ

ಬಂಟ್ವಾಳ, ಜು.13: ದೇವಸ್ಥಾನಗಳನ್ನು ಸಮಾಜ ಮುಖಿಯಾಗಿ ಮುನ್ನಡೆಸುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ಅನೇಕ ಯೋಜನೆಗಳನ್ನು ಹಂತಹಂತವಾಗಿ ಜಾರಿಗೊಳಿಸಲಿದ್ದು, ಅನುಷ್ಠಾನದಲ್ಲಿ ವ್ಯವಸ್ಥಾಪನಾ ಸಮಿತಿಗಳ ತೊಡಗಿಸಿಕೊಳ್ಳುವಿಕೆ ಅತೀ ಅಗತ್ಯ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಪೊಳಲಿಯಲ್ಲಿ ಮಂಗಳವಾರ ಸಂಜೆ ನಡೆದ ದಕ್ಷಿಣ ಕನ್ನಡ ಜಿಲ್ಲೆಯ ಎ ದರ್ಜೆಯ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಪ್ತಪದಿ ಯೋಜನೆಯನ್ನು ಈ ಬಾರಿಯೂ ಮುಜರಾಯಿ ದೇವಸ್ಥಾನಗಳಲ್ಲಿ ಹಮ್ಮಿಕೊಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 36 ದೇವಸ್ಥಾನಗಳಲ್ಲಿಯೂ ಈ ಬಾರಿ ಸಪ್ತಪದಿ ವಿವಾಹ ನಡೆಸುವಂತೆ ಕೋಟ ಮನವಿ ಮಾಡಿದರು.
ಆಯ್ದ ದೇವಸ್ಥಾನಗಳಲ್ಲಿ ಗೋಶಾಲೆ ನಿರ್ಮಿಸಲು ಮುಜರಾಯಿ ಇಲಾಖೆ ಚಿಂತನೆ ನಡೆಸಿದ್ದು ಪೊಳಲಿ ದೇವಸ್ಥಾನದಲ್ಲಿಯೂ ಇದರ ಸ್ಥಾಪನೆಯಾಗಬೇಕು ಎಂದುಕೋಟ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಾಜೇಶ್ ನಾಯ್ಕ್ ಗೋಶಾಲೆ ನಿರ್ಮಾಣಕ್ಕೆ ನದಿ ದಡಕ್ಕೆ ಸಮೀಪವಿರುವ ಸ್ಥಳ ವನ್ನು ಗುರುತಿಸಲಾಗಿದೆ. ಸಚಿವರ ಮಾರ್ಗದರ್ಶನದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು.
ಜಿಲ್ಲೆಯ 495 ದೇವಸ್ಥಾನಗಳ ಪೈಕಿ 325 ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸುವ ಮೂಲಕ ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಮುತುವರ್ಜಿಯಿಂದ ಕಾರ್ಯನಿರ್ವಹಿಸಿದೆ ಎಂದು ಜಿಲ್ಲಾಧಿಕಾರಿಯವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರು ಮಾತನಾಡಿ, ದೇವಸ್ಥಾನದ ಆಸ್ತಿ ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ದೇವಸ್ಥಾನದ ಎಲ್ಲಾ ಆಸ್ತಿವಹಿಗಳ ಮೇಲೆ ಹೆಚ್ಚಿನ ನಿಗಾವಹಿಸುವಂತೆ ವ್ಯವಸ್ಥಾಪನಾ ಸಮಿತಿಯ ಪ್ರಮುಖರಿಗೆ ನಿರ್ದೇಶಿಸಿದರು.
ದೇವಸ್ಥಾನದ ಅಭಿವೃದ್ಧಿ ಕುರಿತಾಗಿ ವಿಶೇಷ ಗಮನಹರಿಸುವುದರ ಜೊತೆಗೆ ಭಕ್ತಾಧಿಗಳಿಗೆ ಅನುಕೂಲ ಒದಗಿಸುವ ಬಗ್ಗೆ ಯೂ ಚಿಂತನೆ ನಡೆಸುವಂತೆ ಸೂಚಿಸಿದರು.
ದೇವಸ್ಥಾನಗಳಲ್ಲಿ ಸಿಬ್ಬಂದಿಕೊರತೆ ಸಮಸ್ಯೆಇದ್ದು, ಪರ್ಯಾಯವಾಗಿ ಕಂದಾಯ ಇಲಾಖೆಯ ಸಿಬ್ಬಂದಿಗಳ ನೇಮಕಕ್ಕೆ ಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿಉ ಪ್ರಸ್ತಾಪಿಸಿದಾಗ, ಪ್ರತಿಕ್ರಿಯಿಸಿದ ಆಯುಕ್ತೆ ರೋಹಿಣಿ ಸಿಂಧೂರಿ, ಇದು ಸರಕಾರದ ಹಂತದಲ್ಲಿ ಆಗಬೇಕಾದ ಕೆಲಸವಾಗಿದ್ದು, ಈ ಬಗ್ಗೆ ಗಮನಹರಿಸಲಾಗುವುದು ಎಂದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮುಜರಾಯಿ ಇಲಾಖೆಯ ಆಯುಕ್ತರಾದ ರೋಹಿಣಿ ಸಿಂಧೂರಿ, ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್, ಗೋವಿಂದ ಭಟ್, ಪೊಳಲಿ ದೇವಳದ ಧರ್ಮದರ್ಶಿ ಯು.ತಾರನಾಥ ಆಳ್ವ, ಸೂರ್ಯನಾರಾಯಣ ರಾವ್, ಆಡಳಿತ ಮಂಜಯ್ಯ ಶೆಟ್ಟಿ, ಪವಿತ್ರಪಾಣಿ ಅರ್ಚಕರಾದ ಮಾಧವ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.







