ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆಯಿಂದ ನರವಿಜ್ಞಾನ ಅಸ್ವಸ್ಥತೆ ಅಡ್ಡ ಪರಿಣಾಮ: ಎಫ್ಡಿಎ
ನ್ಯೂಯಾರ್ಕ್, ಜು.13: ಕೊರೋನ ಸೋಂಕಿನ ವಿರುದ್ಧದ ಸಿಂಗಲ್ ಡೋಸ್ ಲಸಿಕೆ ಜಾನ್ಸನ್ ಆ್ಯಂಡ್ ಜಾನ್ಸನ್ನ ಅಡ್ಡಪರಿಣಾಮದ ಪಟ್ಟಿಗೆ ಅಪರೂಪದ ನರವಿಜ್ಞಾನ ಅಸ್ವಸ್ಥತೆ ಗ್ವಿಲೈನ್ ಬಾರ್ ಸಿಂಡ್ರೋಮ್ ಅನ್ನು ಸೇರಿಸಲಾಗಿದೆ ಎಂದು ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರ (ಎಫ್ಡಿಎ) ಹೇಳಿದೆ. ಆದರೆ ಈ ಅಸ್ವಸ್ಥತೆ ಕಾಣಿಸಿಕೊಳ್ಳುವ ಸಾಧ್ಯತೆ ಅತೀ ವಿರಳ ಎಂದು ಪ್ರಾಧಿಕಾರ ಸ್ಪಷ್ಟನೆ ನೀಡಿದೆ.
ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆಯ ಡೋಸ್ ಪಡೆದ ಕೆಲವರಲ್ಲಿ ಗ್ವಿಲೈನ್ ಬಾರ್ ಸಿಂಡ್ರೋಮ್ ಕಾಣಿಸಿಕೊಂಡಿದೆ. ಬಹುತೇಕ ಪ್ರಕರಣಗಳಲ್ಲಿ ಲಸಿಕೆ ಪಡೆದ 42 ದಿನದೊಳಗೆ ಈ ರೋಗಲಕ್ಷಣ ಕಾಣಿಸಿದೆ ಎಂದು ಎಫ್ಡಿಎ ಹೇಳಿದೆ. ಈ ಅಸ್ವಸ್ಥತೆ ಫ್ಲೂಜ್ವರ, ಝೈಕಾ ವೈರಸ್ನಂತಹ ಹಲವು ಸೋಂಕಿನಿಂದ ಕಾಣಿಸಿಕೊಳ್ಳಬಹುದು. ನರಗಳ ಜೀವಕೋಶಕ್ಕೆ ಹಾನಿ, ನಿಶ್ಯಕ್ತಿ ಮತ್ತು ಕೆಲ ಪ್ರಕರಣಗಳಲ್ಲಿ ಪಾರ್ಶ್ವವಾಯು ಕೂಡಾ ಉಂಟಾಗಬಹುದು. ಪತ್ತೆಯಾದ 100 ಪ್ರಕರಣಗಳಲ್ಲಿ 95 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು 1 ಸಾವು ಸಂಭವಿಸಿದೆ. ಲಭ್ಯ ಮಾಹಿತಿಯ ಪ್ರಕಾರ, ಜಾನ್ಸನ್ ಲಸಿಕೆಯ ಡೋಸ್ಗೂ ಈ ಕಾಯಿಲೆಗೂ ಸಂಬಂಧವಿದೆ. ಆದರೆ ಇನ್ನೂ ದೃಢಪಟ್ಟಿಲ್ಲ ಎಂದು ಎಫ್ಡಿಎ ಹೇಳಿದೆ.





