ಟೋಕಿಯೊ ಒಲಿಂಪಿಕ್ಸ್ ನಿಂದ ಹಿಂದೆ ಸರಿದ ರೋಜರ್ ಫೆಡರರ್

ಲಂಡನ್: ವಿಂಬಲ್ಡನ್ ಟೆನಿಸ್ ಚಾಂಪಿಯನ್ ಶಿಪ್ ವೇಳೆ ಮಂಡಿನೋವು ಕಾಣಿಸಿಕೊಂಡಿರುವ ಕಾರಣ ಮುಂಬರುವ ಟೋಕಿಯೊ ಒಲಿಂಪಿಕ್ಸ್ ನಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಸ್ವಿಸ್ ಟೆನಿಸ್ ಮಾಂತ್ರಿಕ ರೋಜರ್ ಫೆಡರರ್ ಹೇಳಿದ್ದಾರೆ.
ಫೆಡರರ್ ಟ್ವಿಟರ್ ಮೂಲಕ ಈ ಸುದ್ದಿಯನ್ನು ಪ್ರಕಟಿಸಿದರು. ಒಲಿಂಪಿಕ್ಸ್ ನಲ್ಲಿ ಸ್ವಿಟ್ಝೆರ್ ಲ್ಯಾಂಡ್ ಅನ್ನು ಪ್ರತಿನಿಧಿಸುವುದರಿಂದ ವಂಚಿತನಾಗಿದ್ದಕ್ಕೆ ನನಗೆ ತುಂಬಾ ಬೇಸರವಾಗಿದೆ. ಹುಲ್ಲುಹಾಸಿನ ಟೆನಿಸ್ ಅಂಗಣದಲ್ಲಿ ಆಡುವಾಗ ದುರದೃಷ್ಟವಶಾತ್ ಮಂಡಿನೋವು ಕಾಣಿಸಿಕೊಂಡಿದೆ ಎಂದು ಟ್ವೀಟಿಸಿದ್ದಾರೆ.
ಇದೀಗ ಹಳೆಯ ಗಾಯದಿಂದ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದ 39ರ ಹರೆಯದ ಫೆಡರರ್ ಒಲಿಂಪಿಕ್ಸ್ ನಲ್ಲಿ ಆಡುವ ವಿಶ್ವಾಸದಲ್ಲಿದ್ದರು.
ಫೆಡರರ್ ವಿಂಬಲ್ಡನ್ ಟೂರ್ನಿಯ ಕ್ವಾರ್ಟರ್ ಫೈನಲ್ ನಲ್ಲಿ ಪೊಲ್ಯಾಂಡಿನ ಹ್ಯೂಬರ್ಟ್ ಹರ್ಕಝ್ ವಿರುದ್ದ ಸೋತು ಹೊರ ನಡೆದಿದ್ದರು. 2020ರಲ್ಲಿ ಫೆಡರರ್ ಎರಡು ಬಾರಿ ಮಂಡಿ ಸರ್ಜರಿಗೆ ಒಳಗಾಗಿದ್ದರು. ವಿಂಬಲ್ಡನ್ ನಲ್ಲಿ ಆಡುವ ಉದ್ದೇಶದಿಂದ ಫ್ರೆಂಚ್ ಓಪನ್ ನಿಂದ ದೂರ ಉಳಿದಿದ್ದರು.
Next Story





