ಶಾಲೆ ಊಟದಲ್ಲಿ ಮಾಂಸ, ಹೈನೋದ್ಯಮ ನಿಷೇಧಕ್ಕೆ ತಡೆ ಹಿಂದೆಗೆಯುವಂತೆ ಲಕ್ಷದ್ವೀಪ ಆಡಳಿತದಿಂದ ಹೈಕೋರ್ಟ್ ಗೆ ಮನವಿ

ಕವರಟ್ಟಿ: ಕೇಂದ್ರಾಡಳಿತ ಪ್ರದೇಶದ ಶಾಲೆಗಳಲ್ಲಿ ಮಧ್ಯಾಹ್ನದೂಟದಲ್ಲಿ ಮಾಂಸಕ್ಕೆ ನಿಷೇಧ ಹಾಗೂ ಹೈನುಗಾರಿಕೆ ಮುಚ್ಚುವ ಆದೇಶಕ್ಕೆ ವಿಧಿಸಿದ್ದ ಮಧ್ಯಂತರ ತಡೆಯನ್ನು ಹಿಂಪಡೆಯುವಂತೆ ಲಕ್ಷದ್ಪೀಪ ಆಡಳಿತ ಸೋಮವಾರ ಕೇರಳ ಉಚ್ಚ ನ್ಯಾಯಾಲಯದಲ್ಲಿ ಮನವಿ ಮಾಡಿದೆ.
ಜೂನ್ 22ರಂದು ಕೇರಳ ಉಚ್ಚ ನ್ಯಾಯಾಲಯ ಆದೇಶಕ್ಕೆ ತಡೆ ನೀಡಿತ್ತು ಹಾಗೂ ಪ್ರತಿ ಅಫಿಡಾವಿಟ್ ಸಲ್ಲಿಸಲು ಕೇಂದ್ರ ಸರಕಾರಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿತ್ತು. ಲಕ್ಷದ್ಪೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಪರಿಚಯಿಸಿದ ನಿಷೇಧದ ಕುರಿತಂತೆ ಕೇಂದ್ರಾಡಳಿತ ಪ್ರದೇಶದ ನಿವಾಸಿಗಳು ಹಾಗೂ ಪ್ರತಿಪಕ್ಷಗಳಿಂದ ಸಾಮೂಹಿಕ ಆಕ್ರೋಶ ವ್ಯಕ್ತವಾದ ನಡುವೆ ಉಚ್ಚ ನ್ಯಾಯಾಲಯ ಈ ಆದೇಶ ನೀಡಿತ್ತು.
ನಿರ್ಧಾರಕ್ಕೆ ತಡೆ ವಿಧಿಸಿ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ ಜೂನ್ 22ರಂದು ನೀಡಿದ್ದ ಆದೇಶದ ವಿರುದ್ಧ ಸೋಮವಾರ ಸಲ್ಲಿಸಲಾದ ಪ್ರತಿ ಅಫಿಡಾವಿಟ್ನಲ್ಲಿ ಪ್ರಫುಲ್ ಖೋಡಾ ಪಟೇಲ್ ನೇತೃತ್ವದ ಆಡಳಿತ ಈ ಮನವಿ ಮಾಡಿದೆ.
ಲಕ್ಷದ್ವೀಪದ ಸಂಸ್ಕೃತಿ ಮೇಲೆ ಪರಿಣಾಮ ಉಂಟಾಗುವ ಹಾಗೂ ಸಂವಿಧಾನದ ಹಕ್ಕುಗಳ ಉಲ್ಲಂಘನೆ ಸಾಧ್ಯತೆ ಇರುವುದರಿಂದ ಯಾವುದೇ ಸುಧಾರಣೆಗೆ ತಡೆ ನೀಡುವಂತೆ ಕೋರಿ ಲಕ್ಷದ್ಪೀಪದ ನಿವಾಸಿ ಅಜ್ಮಲ್ ಅಹ್ಮದ್ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿ ಉಚ್ಚ ನ್ಯಾಯಾಲಯ ಈ ಆದೇಶ ನೀಡಿತ್ತು.