ಬೈಕಂಪಾಡಿ: ಎಪಿಎಂಸಿಯಲ್ಲಿ ಹಣ್ಣು-ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಶಿಲಾನ್ಯಾಸ
![ಬೈಕಂಪಾಡಿ: ಎಪಿಎಂಸಿಯಲ್ಲಿ ಹಣ್ಣು-ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಶಿಲಾನ್ಯಾಸ ಬೈಕಂಪಾಡಿ: ಎಪಿಎಂಸಿಯಲ್ಲಿ ಹಣ್ಣು-ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಶಿಲಾನ್ಯಾಸ](https://www.varthabharati.in/sites/default/files/images/articles/2021/07/14/298786-1626241619.gif)
ಮಂಗಳೂರು, ಜು.14 ಬೈಕಂಪಾಡಿಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಹಣ್ಣು ಮತ್ತು ತರಕಾರಿ ಮಾರಾಟಕ್ಕೆ ಆಧುನಿಕ ಮಾರುಕಟ್ಟೆ ನಿರ್ಮಾಣಕ್ಕೆ ಕೃಷಿ ಮಾರುಕಟ್ಟೆ ಹಾಗೂ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಬುಧವಾರ ಶಿಲಾನ್ಯಾಸ ನೆರವೇರಿಸಿದರು.
ಬಳಿಕ ನಡೆದ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಸಚಿವರು, ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಅನುದಾನ ಒದಗಿಸಲು ಸಾಧ್ಯವಾಗಿಲ್ಲ. ಈಗಾಗಲೇ ಈ ಬಗ್ಗೆ ಮುಖ್ಯಮಂತ್ರಿಯನ್ನು ಕೋರಲಾಗಿದ್ದು, ಅವರು ನೀಡುವ ಅನುದಾನದ ಆಧಾರಲ್ಲಿ ಮಂಗಳೂರು ಎಪಿಎಂಸಿಗೂ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಸಹಕಾರ ಇಲಾಖೆಯು ಅಪೆಕ್ಸ್, ಡಿಸಿಸಿ ಬ್ಯಾಂಕ್ ಗಳಲ್ಲಿ ಸಾಲ ಮಾಡಿರುವ 10,140 ರೈತರ ಸಾಲ ಮನ್ನಾಕ್ಕೆ 81 ಕೋಟಿ ರೂ.ಗಳ ಅಗತ್ಯವಿದೆ. ಇದಕ್ಕಾಗಿ ಸಭೆ ನಡೆಸಿ ಸರಕಾರಕ್ಕೆ ಮಾಹಿತಿ ನೀಡಲಾಗಿದೆ. ಇದೇ ವೇಳೆ 20,810 ಕೋಟಿ ರೂ.ಗಳನ್ನು ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಒದಗಿಸಲು ಮೀಸಲಿಡುವಂತೆ ಡಿಸಿಸಿ ಬ್ಯಾಂಕ್ ಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮಂಗಳೂರು ಎಪಿಎಂಸಿ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಅವಸಾನದ ಅಂಚಿನಲ್ಲಿರುವ ಎಪಿಎಂಸಿಯ ಅಸ್ತಿತ್ವವನ್ನು ಉಳಿಸಲು ಪ್ರಾಯೋಗಿಕವಾಗಿ ದ.ಕ. ಜಿಲ್ಲೆ ಸೇರಿದಂತೆ ರಾಜ್ಯದ ಕೆಲ ಎಪಿಎಂಸಿಗಳ ಬಲವರ್ಧನೆಗೆ ಮುಂದಾಗಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು.
ಸ್ಥಳೀಯ ಶಾಸಕ ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಶಾಸಕರಾದ ವೇದವ್ಯಾಸ ಕಾಮತ್, ಉಮನಾಥ್ ಕೋಟ್ಯಾನ್, ಮೇಯರ್ ಪ್ರೇಮಾನಂದ ಶೆಟ್ಟಿ, ಎಪಿಎಂಸಿ ಉಪಾಧ್ಯಕ್ಷೆ ರಜನಿ ದಗ್ಗಣ್ಣ, ಕಾರ್ಯದರ್ಶಿ ಸಿ.ಎಚ್.ಮೋಹನ್, ಎಪಿಎಂಸಿ ಆಡಳಿತ ಮಂಡಳಿ ಸಮಿತಿಯ ಸದಸ್ಯರು ಸೇರಿದಂತೆ ಗಣ್ಯರು ಭಾಗವಹಿಸಿದ್ದರು.