ಉತ್ತರಪ್ರದೇಶ:ಕಾರು ಪಲ್ಟಿಯಾಗಿ ಒತ್ತೆಸೆರೆಯಿಂದ ಪಾರಾದ ಯುವತಿ,ಪೊಲೀಸರಿಗೆ ದೂರು

ಸಾಂದರ್ಭಿಕ ಚಿತ್ರ, photo: TOI
ಲಕ್ನೋ: ವ್ಯಕ್ತಿಯೊಬ್ಬ 24 ವರ್ಷದ ಯುವತಿಯೊಬ್ಬಳನ್ನು ಒತ್ತೆಯಾಳಾಗಿ ಇಟ್ಟುಕೊಂಡು ತನ್ನ ಕಾರಿನಲ್ಲಿ ವೇಗವಾಗಿ ಹೋಗುತ್ತಿದ್ದಾಗ ಸೀತಾಪುರ ರಸ್ತೆಯಲ್ಲಿ ವಾಹನ ಪಲ್ಟಿಯಾಗಿದೆ. ಒತ್ತೆಸೆರೆಯಿಂದ ಪಾರಾದ ಯುವತಿ ಪೊಲೀಸ್ ತುರ್ತು ಸಹಾಯವಾಣಿಗೆ ಡಯಲ್ ಮಾಡಿದ್ದು, ಪೊಲೀಸರ ಸಹಾಯದಿಂದ ಮೆಹಮೂದಾಬಾದ್ ಪೊಲೀಸ್ ಠಾಣೆಗೆ ತಲುಪಿದ್ದಾಳೆ. ಮಂಗಳವಾರ ಬೆಳಿಗ್ಗೆ ಘಟನೆಯ ಬಗ್ಗೆ ವಿವರಿಸಿದ್ದಾಳೆ.
ಅಜಮ್ಗಢದ ನಿವಾಸಿ, ಯುವತಿಯು ಲಕ್ನೋದಲ್ಲಿ ತನ್ನ ಸಂಬಂಧಿಕರೊಂದಿಗೆ ಉಳಿದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ದಳು. ತನ್ನ ಕಾರಿನಲ್ಲಿ ಲಿಫ್ಟ್ ನೀಡುವ ನೆಪವೊಡ್ಡಿ ವ್ಯಕ್ತಿಯೊಬ್ಬ ಯುವತಿಯನ್ನು ಅಪಹರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿಯ ದೂರಿನ ಆಧಾರದ ಮೇಲೆ 30 ವರ್ಷದ ಆರೋಪಿ ರಾಹುಲ್ ವರ್ಮಾ ವಿರುದ್ಧ ಲೈಂಗಿಕ ದೌರ್ಜನ್ಯ, ಕ್ರಿಮಿನಲ್ ಬೆದರಿಕೆ ಹಾಗೂ ಅಪಹರಣ ಪ್ರಕರಣ ದಾಖಲಿಸಲಾಗಿದೆ ಎಂದು ಮೆಹಮೂದಾಬಾದ್ ಎಸ್ಎಚ್ಒ ಅನಿಲ್ ಪಾಂಡೆ ತಿಳಿಸಿದ್ದಾರೆ.
ಯುವತಿಗೆ ಕಿರುಕುಳ ನೀಡಲು ಯತ್ನಿಸುತ್ತಿದ್ದಾಗ ವಾಹನದ ನಿಯಂತ್ರಣ ಕಳೆದುಕೊಂಡಿದ್ದ ವರ್ಮಾಗೆ ಅಪಘಾತದಲ್ಲಿ ಗಾಯವಾಗಿದೆ. ಕಾರು ಇದ್ದಕ್ಕಿದ್ದಂತೆ ಸ್ಕಿಡ್ ಹಾಗೂ ಪಲ್ಟಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಪಡೆದುಕೊಳ್ಳಲಾಗುವುದು" ಎಂದು ಎಸ್ ಎಚ್ ಒ ಹೇಳಿದರು.







