ಡಝನ್ ಗಟ್ಟಲೆ ಮಸೀದಿಗಳನ್ನು ವಿನ್ಯಾಸಗೊಳಿಸಿರುವ ವಾಸ್ತುಶಿಲ್ಪಿ ಗೋವಿಂದನ್ ಗೋಪಾಲಕೃಷ್ಣನ್
ಸೌಹಾರ್ದದ ಪ್ರಬಲ ಪ್ರತಿಪಾದಕ ಈ ವಿಶಿಷ್ಟ ಆರ್ಕಿಟೆಕ್ಟರ್

Photo: Al jazeera
ಹೊಸದಿಲ್ಲಿ,ಜು.14: ಡಝನ್ ಗಟ್ಟಲೆ ಮಸೀದಿಗಳು,ನಾಲ್ಕು ಚರ್ಚ್ ಗಳು ಮತ್ತು ದೇವಸ್ಥಾನವನ್ನು ವಿನ್ಯಾಸಗೊಳಿಸಿರುವ 85ರ ಹರೆಯದ ಗೋವಿಂದನ್ ಗೋಪಾಲಕೃಷ್ಣನ್ ನಾವು ಮಾಮೂಲಾಗಿ ನೋಡುತ್ತಿರುವ ವಾಸ್ತುಶಿಲ್ಪಿಯಲ್ಲ.
ತನ್ನ ಆರು ದಶಕಗಳ ವೃತ್ತಿಜೀವನದಲ್ಲಿ 'ಮಸೀದಿ ಮನುಷ್ಯ' ಎಂದೇ ಜನಪ್ರಿಯರಾಗಿರುವ ಗೋಪಾಲಕೃಷ್ಣನ್ ಅವರೇ ಹೇಳುವಂತೆ ಮಾನವತೆಯ ಏಕತೆಯ ಮೇಲಿನ ಅವರ ಪ್ರೀತಿಯೇ ಅವರ ಈ ಕಾರ್ಯಕ್ಕೆ ಚಾಲಕಶಕ್ತಿಯಾಗಿತ್ತು.
ಕೇರಳದ ತಿರುವನಂತಪುರದಲ್ಲಿಯ ತನ್ನ ನಿವಾಸದಲ್ಲಿ ಕುರ್ ಆನ್, ಬೈಬಲ್ ಮತ್ತು ಭಗವದ್ಗೀತೆಯ ಪ್ರತಿಗಳನ್ನು ಇಟ್ಟುಕೊಂಡಿರುವ ಗೋಪಾಲಕೃಷ್ಣನ್ ಧಾರ್ಮಿಕ ಸೌಹಾರ್ದತೆಯಲ್ಲಿ ಬಲವಾದ ನಂಬಿಕೆಯನ್ನು ಹೊಂದಿದ್ದಾರೆ.
‘ಪವಿತ್ರ ರಮಝಾನ್ ಮಾಸದಲ್ಲಿ ನಾನು ರೋಝಾ (ಉಪವಾಸ)ವನ್ನು ಆಚರಿಸುತ್ತೇನೆ. ಶಬರಿಮಲೆ ಯಾತ್ರೆ ಸಂದರ್ಭದಲ್ಲಿಯೂ 41 ದಿನಗಳ ಉಪವಾಸ ವ್ರತವನ್ನು ಆಚರಿಸುತ್ತೇನೆ. ನನ್ನ ಪತ್ನಿ ಜಯಾ ಕ್ರಿಶ್ಚಿಯನ್ ಆಗಿರುವುದರಿಂದ ಈಸ್ಟರ್ ಉಪವಾಸವನ್ನೂ ಆಚರಿಸುತ್ತೇನೆ. ನನ್ನ ಓರ್ವ ಮಗ ಮುಸ್ಲಿಂ ಮಹಿಳೆಯನ್ನು ಮದುವೆಯಾಗಿದ್ದಾನೆ. ನಾನು ನನ್ನ ಮನೆಗೆ ಎಲ್ಲ ಧರ್ಮಗಳನ್ನೂ ಸ್ವಾಗತಿಸುತ್ತೇನೆ ಮತ್ತು ಅವುಗಳಿಗೆ ಸಮಾನ ಗೌರವ ನೀಡುತ್ತೇನೆ’ ಎಂದು ಹೇಳಿದ ಗೋಪಾಲಕೃಷ್ಣನ್ ಅವರದು 60 ವರ್ಷಗಳ ಸುಮಧುರ ದಾಂಪತ್ಯ.

ಫೋಟೊ: Al Jazeera
ಅಂದ ಹಾಗೆ ಗೋಪಾಲಕೃಷ್ಣನ್ ವಾಸ್ತುಶಿಲ್ಪವನ್ನು ಕಲಿಯಲು ಯಾವುದೇ ಕಾಲೇಜಿಗೆ ಹೋಗಿರಲಿಲ್ಲ. ಕುಟುಂಬದ ಆರ್ಥಿಕ ದುಃಸ್ಥಿತಿಯಿಂದಾಗಿ ಪ್ರೌಢಶಿಕ್ಷಣದ ಬಳಿಕ ಕಾಲೇಜು ಮೆಟ್ಟಿಲೇರಲು ಸಾಧ್ಯವಾಗದ ಅವರು ಅಪ್ರೆಂಟಿಸ್ ಆಗಿ ಕಟ್ಟಡ ನಿರ್ಮಾಣ ಗುತ್ತಿಗೆದಾರರಾಗಿದ್ದ ತನ್ನ ತಂದೆಯ ಕೆಲಸದಲ್ಲಿ ಕೈಜೋಡಿಸಿದ್ದರು. ತನ್ನ ತಂದೆ ನಿರ್ಮಿಸುತ್ತಿದ್ದ ಕಟ್ಟಡಗಳ ನೀಲಿನಕ್ಷೆಗಳನ್ನು ತನ್ನ ನೋಟ್ ಬುಕ್ ನಲ್ಲಿ ಚಿತ್ರಿಸುವ ಮೂಲಕ ಆರಂಭಿಸಿದ್ದ ಗೋಪಾಲಕೃಷ್ಣನ್ ಬಳಿಕ ಅವುಗಳ ವಿವರಗಳನ್ನು ಮೂಲ ರಚನೆಗಳೊಂದಿಗೆ ಹೋಲಿಸುತ್ತಿದ್ದರು ಮತ್ತು ನಿರ್ಮಾಣ ತಾಂತ್ರಿಕತೆಗಳು,ವರ್ಣ ಸಂಯೋಜನೆ ಇತ್ಯಾದಿಗಳ ಬಗ್ಗೆ ತಂದೆಯಿಂದ ತಿಳಿದುಕೊಂಡು ತನ್ನ ಜ್ಞಾನವನ್ನು ಬೆಳೆಸಿಕೊಳ್ಳುತ್ತಿದ್ದರು.
ತನ್ಮಧ್ಯೆ 60ರ ದಶಕದಲ್ಲಿ ಪ್ರತಿಷ್ಠಿತ ಆಂಗ್ಲೋ-ಇಂಡಿಯನ್ ಡ್ರಾಫ್ಟ್ಟ್ ಮನ್(ನಕ್ಷೆ ತಯಾರಕ) ಆಗಿದ್ದ ಎಲ್.ಎ.ಸಲ್ಡಾನಾ ಅವರ ಗೆಳೆತನವನ್ನು ಸಂಪಾದಿಸಿದ್ದ ಗೋಪಾಲಕೃಷ್ಣನ್ ಅವರಿಂದ ಸ್ಕೆಚಿಂಗ್ ಮತ್ತು ಡ್ರಾಯಿಂಗ್ನ ಪ್ರಾಥಮಿಕ ಜ್ಞಾನವನ್ನು ಪಡೆದುಕೊಂಡಿದ್ದರು. ಕೇರಳ ಲೋಕೋಪಯೋಗಿ ಇಲಾಖೆಯಲ್ಲಿ ವೇತನರಹಿತ ಅಪ್ರೆಂಟಿಸ್ ಆಗಿ ದುಡಿದಿದ್ದು ತನ್ನ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಅವರಿಗೆ ನೆರವಾಗಿತ್ತು ಮತ್ತು ಬಳಿಕ ತಿರುವನಂತಪುರದ ಪ್ರಸಿದ್ಧ ಪಾಲಯಂ ಮಸೀದಿಯ ಪುನರ್ನಿರ್ಮಾಣದಲ್ಲಿ ತಂದೆಗೆ ನೆರವಾಗುತ್ತಿದ್ದರು.

ಫೋಟೊ: Al Jazeera
ಪುನರ್ನಿರ್ಮಾಣ ಕಾರ್ಯ ಐದು ವರ್ಷಗಳ ಸಮಯವನ್ನು ತೆಗೆದುಕೊಂಡಿತ್ತು ಮತ್ತು ಅದು ಅವರಿಗೆ ಕಲಿಕೆಯ ಅತ್ಯುತ್ತಮ ಅನುಭವವನ್ನು ನೀಡಿತ್ತು. ವಾಸ್ತುಶಿಲ್ಪ ತನ್ನ ಕ್ಷೇತ್ರ ಎಂದು ಅಂದೇ ಅವರು ನಿರ್ಧರಿಸಿದ್ದರು. ವಾಣಿಜ್ಯ ಮತ್ತು ವಸತಿ ಸಂಕೀರ್ಣಗಳು,ಶಾಪಿಂಗ್ ಮಾಲ್ ಗಳು ಮತ್ತು ಸಮುದಾಯ ಕೇಂದ್ರಗಳ ಕೆಲಸಗಳು ಅವರ ಅನುಭವವನ್ನು ಇನ್ನಷ್ಟು ಹೆಚ್ಚಿಸಿದ್ದವು.
1964ರಲ್ಲಿ ಭಾರತದ ಆಗಿನ ರಾಷ್ಟ್ರಪತಿ ಡಾ.ಝಾಕಿರ್ ಹುಸೇನ್ ಅವರು ಪಾಲಯಂ ಮಸೀದಿಯನ್ನು ಉದ್ಘಾಟಿಸಿದ್ದು, ಅದು ತನಗೆ ಮತ್ತು ತಂದೆಗೆ ಭಾರೀ ಹೆಮ್ಮೆಯ ವಿಷಯವಾಗಿತ್ತು ಎಂದು ಗೋಪಾಲಕೃಷ್ಣನ್ ನೆನಪಿಸಿಕೊಂಡಿದ್ದಾರೆ. ಓರ್ವ ಹಿಂದು ಕ್ರಿಶ್ಚಿಯನ್ ಸ್ನೇಹಿತ(ಸಲ್ಡಾನಾ)ನ ಬೆಂಬಲದಿಂದ ದೇವಸ್ಥಾನ ಮತ್ತು ಚರ್ಚ್ ಗಳ ನಡುವೆ ಮಸೀದಿಯನ್ನು ನಿರ್ಮಿಸಲು ದೈವಿಕ ಹಸ್ತಕ್ಷೇಪವೇ ಕಾರಣವಾಗಿತ್ತು ಎನ್ನುವುದು ಗೋಪಾಲಕೃಷ್ಣನ್ ರ ನಂಬಿಕೆಯಾಗಿದೆ.
ವಾಸ್ತುಶಿಲ್ಪ ಶಾಸ್ತ್ರದಲ್ಲಿ ವಿಧ್ಯುಕ್ತ ಪದವಿಯನ್ನು ಪಡೆದಿರದಿದ್ದರೂ ವಾಸ್ತುಶಿಲ್ಪ ತಂತ್ರಗಳ ಬಗ್ಗೆ ಅವರ ಗ್ರಹಣಶಕ್ತಿ,ಕೆಲಸದಲ್ಲಿ ಎಂದೂ ರಾಜಿ ಮಾಡಿಕೊಳ್ಳದ ನೀತಿ ಮತ್ತು ಗ್ರಾಹಕನ ನಿರೀಕ್ಷೆಯನ್ನೂ ಮೀರಿ ಕಾರ್ಯವನ್ನು ಪೂರ್ಣಗೊಳಿಸುವ ಸಾಮರ್ಥ್ಯ ಇವು ಅವರನ್ನು ಓರ್ವ ಯಶಸ್ವಿ ವಾಸ್ತುಶಿಲ್ಪಿಯನ್ನಾಗಿಸಿದ್ದವು. ತಿರುವನಂತಪುರದಲ್ಲಿ ಮೂರಂತಸ್ತಿನ ಕಟ್ಟಡ ನಿರ್ಮಾಣ ತಾನು ಸ್ವತಂತ್ರವಾಗಿ ಮಾಡಿದ ಮೊದಲ ಕೆಲಸವಾಗಿತ್ತು ಮತ್ತು ಇದು ಕಟ್ಟಡದ ಮಾಲಿಕನಿಗೆ ಸಂಪೂರ್ಣ ತೃಪ್ತಿಯನ್ನು ನೀಡಿತ್ತು ಎನ್ನುತ್ತಾರೆ ಗೋಪಾಲಕೃಷ್ಣನ್.

ಫೋಟೊ: Al Jazeera
1976ರಲ್ಲಿ ತಿರುವನಂತಪುರದ ಬೀಮಾಪಲ್ಲಿ ಜುಮಾ ಮಸೀದಿಯ ನಿರ್ಮಾಣ ಕಾರ್ಯದ ನೇತೃತ್ವನ್ನು ವಹಿಸಿದ್ದು ಅವರ ವೃತ್ತಿಜೀವನದಲ್ಲಿಯ ಮಹತ್ವದ ತಿರುವಾಗಿತ್ತು. ಹಣಕಾಸು ದೇಣಿಗೆಗಳ ಮೂಲಕ ನಿಧಾನವಾಗಿ ಹರಿದುಬರುತ್ತಿದ್ದರಿಂದ ಈ ಬೃಹತ್ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು ಬರೋಬ್ಬರಿ 18 ವರ್ಷಗಳನ್ನು ತೆಗೆದುಕೊಂಡಿತ್ತು. ಹಣಕಾಸಿನ ಸವಾಲುಗಳಿದ್ದರೂ ವಾಸ್ತುಶಿಲ್ಪದ ಏಕತಾನತೆಯಿಂದ ದೂರ ಸರಿದಿದ್ದ ಗೋಪಾಲಕೃಷ್ಣನ್ ನಿರ್ಮಾಣದಲ್ಲಿ ತಾಜಾತನ ಮತ್ತು ನವೀನತೆಯನ್ನು ತಂದಿದ್ದರು. ತಾನು ನಿರ್ಮಿಸಿದ ಪ್ರತಿ ಮಸೀದಿಯಲ್ಲಿಯೂ ಅವರು ವಿನೂತನತೆಯನ್ನು ಮೆರೆದಿದ್ದಾರೆ. ಉದಾಹರಣೆಗೆ ಕರುಣಾಗಪಲ್ಲಿಯ ಶೇಖ್ ಮಸೀದಿಯು ಮುಘಲ್ ಪ್ರೇಮ ಸ್ಮಾರಕ ತಾಜ ಮಹಲ್ ನ ನೋಟವನ್ನು ಹೊಂದಿದ್ದರೆ,ಕೊಲ್ಲಂ ಬಳಿಯ ಝಿಯಾರತ್ಮೂಡು ಮಸೀದಿಯು ಇಂಡೋ-ಸಾರಸೆನಿಕ್ ಶೈಲಿಗಳ ಮಿಶ್ರಣವಾಗಿದೆ.
ಮಸೀದಿಗಳ ಮುಂಭಾಗವನ್ನು ಪವಿತ್ರ ಕುರ್ ಆನ್ ನ ವಚನಗಳಿಂದ ಚಂದಗೊಳಿಸಿರುವ ಗೋಪಾಲಕೃಷ್ಣನ್ ಅವುಗಳ ಮಲಯಾಳಂ ಅನುವಾದವನ್ನೂ ಕೆತ್ತಿದ್ದಾರೆ.
ಗೋಪಾಲಕೃಷ್ಣನ್ ರ ಹೊಸತನಗಳು ಭಕ್ತರನ್ನು ಪುಳಕಿತಗೊಳಿಸಿದ್ದರೂ ಕೆಲವರು ಆಕ್ಷೇಪಗಳನ್ನೆತ್ತಿದ್ದೂ ಇದೆ. ಬೀಮಾಪಲ್ಲಿ ಮಸೀದಿಯಲ್ಲಿ ಅವರು ಕಮಲ ಹೂವಿನ ಲಕ್ಷಣಗಳನ್ನು ಬಳಸಿದ್ದು ವಿವಾದವನ್ನು ಸೃಷ್ಟಿಸಿತ್ತು. ‘ಕಮಲ ಸುಂದರವಾದ ಪುಷ್ಪ, ಅದು ಭಾರತದ ರಾಷ್ಟ್ರೀಯ ಪುಷ್ಪವೂ ಹೌದು. ಹೀಗಾಗಿ ಓರ್ವ ಕಲಾವಿದನಾಗಿ ಅದಕ್ಕೆ ನನ್ನ ಗೌರವವನ್ನು ವ್ಯಕ್ತಪಡಿಸಲು ಅದನ್ನು ಬಳಸಿದ್ದರಲ್ಲಿ ಯಾವ ಹಾನಿಯೂ ನನಗೆ ಕಾಣುತ್ತಿಲ್ಲ. ಆದರೆ ಕೆಲವರು ಅದನ್ನು ಬೇರೆ ರೀತಿಯಲ್ಲಿ ನೋಡಿದ್ದಾರೆ ’ಎಂದು ಅವರು ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತ ಹೇಳಿದರು.
ಕಮಲ ಪುಷ್ಪ ವಿವಿಧ ಹಿಂದು ದೇವತೆಗಳ ಚಿತ್ರಗಳಲ್ಲಿ ಕಂಡು ಬರುತ್ತದೆ ಮತ್ತು ಅದು ಬಿಜೆಪಿಯ ಚುನಾವಣಾ ಚಿಹ್ನೆಯೂ ಆಗಿದೆ. ಹಳೆಯ ಸಂಪ್ರದಾಯಗಳನ್ನು ಪುನರ್ ಅವಿಷ್ಕರಿಸುವ ತನ್ನ ಪ್ರವೃತ್ತಿಗೆ ಪ್ರತಿರೋಧವಿದ್ದರೂ ಗೋಪಾಲಕೃಷ್ಣನ್, ದೇವರ ನಿವಾಸವು ಪೂರ್ವಾಗ್ರಹಗಳಿಂದ ಮುಕ್ತವಾಗಿರಬೇಕು, ಹೀಗಾಗಿ ತಾನು ಮಸೀದಿಗಳನ್ನು ನಿರ್ಮಿಸುವಾಗ ತನ್ನ ಹೃದಯವು ಹೇಳುವುದನ್ನು ಕೇಳುತ್ತೇನೆ ಎನ್ನುತ್ತಾರೆ.
ಕೇರಳದ ಹೊರಗಿನ ಯಾವುದೇ ಇಸ್ಲಾಮಿಕ್ ವಾಸ್ತುಶಿಲ್ಪ ರಚನೆಗಳಿಗೆ ಗೋಪಾಲಕೃಷ್ಣನ್ ಭೇಟಿ ನೀಡಿಲ್ಲ, ಅವುಗಳನ್ನು ನೋಡಿಯೂ ಇಲ್ಲ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಪ್ರಯೋಗ ಮತ್ತು ದೋಷಗಳಿಂದ ಕಲಿಯುವಿಕೆ ಹಾಗೂ ತನ್ನ ತೀಕ್ಷ್ಣ ಅವಲೋಕನದಿಂದ ಅವರು ತನ್ನ ನಿರ್ಮಾಣಗಳಲ್ಲಿ ಹೊಸ ಸೌಂದರ್ಯವನ್ನು ತುಂಬಿದ್ದಾರೆ.
ಇಂಡೋ-ಸಾರಸೆನಿಕ್ ವಾಸ್ತುಶಿಲ್ಪ ಶೈಲಿಯನ್ನು ಅನುಸರಿಸುವ ಅವರು ಬ್ರಿಟಿಷ್ ವಿದ್ವಾಂಸ ಮತ್ತು ಇತಿಹಾಸಕಾರ ಪರ್ಸಿ ಬ್ರೌನ್ ಅವರ ‘ಭಾರತೀಯ ವಾಸ್ತುಶಿಲ್ಪ:ಇಸ್ಲಾಮಿಕ್ ಯುಗ ಮತ್ತು ಭಾರತೀಯ ವಾಸ್ತುಶಿಲ್ಪ:ಹಿಂದು ಯುಗ ’ಪುಸ್ತಕವನ್ನು ತನ್ನ ಬೈಬಲ್ ಎಂದು ಪರಿಗಣಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಗೋಪಾಲಕೃಷ್ಣನ್ ತಾನು ಆರು ವರ್ಷಗಳಲ್ಲಿ ಪೂರ್ಣಗೊಳಿಸಿರುವ 1200 ಪುಟಗಳ ‘ನಾನು ಕಂಡ ಕುರ್ ಆನ್’ ಪುಸ್ತಕದ ವಿನ್ಯಾಸ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ‘ಈ ಪುಸ್ತಕವು ಓದುಗರಿಗೆ ಸರಳ ಮತ್ತು ಅರ್ಥಪೂರ್ಣ ರೀತಿಯಲ್ಲಿ ಕುರ್ ಆನ್ ಅನ್ನು ತಿಳಿದುಕೊಳ್ಳಲು ನೆರವಾಗುತ್ತದೆ. ಕುರ್ ಆನ್ ಓದುವಾಗ ಅದರ ಹಾಗೂ ಬೈಬಲ್ ಮತ್ತು ಗೀತೆಯ ಬೋಧನೆಗಳಲ್ಲಿ ಸಾಮ್ಯತೆಗಳನ್ನು ನಾನು ಕಂಡುಕೊಂಡಿದ್ದೆ. ಕುರ್ ಆನ್ ನ ಪ್ರತಿಯೊಂದೂ ವಚನವನ್ನು ಇತರ ಎರಡು ಧರ್ಮಗ್ರಂಥಗಳೊಂದಿಗೆ ಹೋಲಿಸಿ ನನ್ನ ಬರಹಕ್ಕಾಗಿ ಟಿಪ್ಪಣಿಗಳನ್ನು ಮಾಡಿಕೊಂಡಿದ್ದೆ. ಇವು ನನ್ನ ಪುಸ್ತಕದ ಮುಖ್ಯ ತಿರುಳಾಗಿವೆ. ಒಂದಲ್ಲೊಂದು ದಿನ ಅದು ಪ್ರಕಟಗೊಳ್ಳುವ ಭರವಸೆ ನನಗಿದೆ’ಎಂದು ಗೋಪಾಲಕೃಷ್ಣನ್ ಹೇಳಿದರು.
ಗೋಪಾಲಕೃಷ್ಣನ್ ಧಾರ್ಮಿಕ ತಿಳುವಳಿಕೆ ಮತ್ತು ಸಹಿಷ್ಣುತೆಯನ್ನು ಉತ್ತೇಜಿಸುವ ಸಾಮಾಜಿಕ ಹಾಗೂ ದತ್ತಿ ಸಂಸ್ಥೆ ‘ಮಾನವಮೈತ್ರಿ’ಯ ಸ್ಥಾಪಕರೂ ಆಗಿದ್ದಾರೆ. ಮಂದಿರ-ಮಸೀದಿಗಳ ನಿರ್ಮಾಣದಲ್ಲಿ ತನ್ನ ಜೀವಮಾನವನ್ನು ಕಳೆದಿರುವ ಗೋಪಾಲಕೃಷ್ಣನ್ ತಾನು ಮಾಡಬೇಕಿರುವ ಒಂದು ಕೆಲಸ ಇನ್ನೂ ಬಾಕಿಯಿದೆ,ಅದು ಒಂದೇ ಸೂರಿನಡಿ ಗೀತೆ,ಕುರ್ ಆನ್ ಮತ್ತು ಬೈಬಲ್ ಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ಧಾರ್ಮಿಕ ಚಿಂತನೆಗಳ ಶಾಲೆಗೆ ಅಡಿಪಾಯ ಹಾಕುವುದು ಎಂದು ಹೇಳಿದರು.
‘ಒಂದಲ್ಲೊಂದು ದಿನ ನನ್ನ ಕನಸು ನನಸಾಗುತ್ತದೆ ಎಂದು ಆಶಿಸಿದ್ದೇನೆ. ದೇವರನ್ನು ತಲುಪಲು ಮಾರ್ಗವನ್ನಾಗಿ ನಾವು ಯಾವುದೇ ಧರ್ಮವನ್ನು ಬಳಸುತ್ತಿದ್ದರೂ ಅಂತಿಮವಾಗಿ ದೇವರು ಒಬ್ಬನೇ ಎನ್ನುವುದನ್ನು ನಾವೆಲ್ಲರೂ ಅರಿತುಕೊಂಡರೆ ಅದು ಮಹತ್ವದ್ದಾಗುತ್ತದೆ. ಅದನ್ನು ಅರಿತುಕೊಳ್ಳುವ ಮತ್ತು ಎಲ್ಲ ಧರ್ಮಗಳನ್ನು ಗೌರವಿಸುವ ಘಳಿಗೆಯಲ್ಲಿ ಎಲ್ಲ ಕಲಹಗಳು ಅಂತ್ಯಗೊಳ್ಳುತ್ತವೆ ’ ಎಂದು ಗೋಪಾಲಕೃಷ್ಣನ್ ಹೇಳಿದರು.
ಕೃಪೆ: Aljazeera.com







