ಎಲ್ಗಾರ್ ಪರಿಷದ್ ಪ್ರಕರಣ: ತನಿಖೆಯ ವರ್ಗಾವಣೆ ಪ್ರಶ್ನಿಸಿ ಆರೋಪಿಗಳ ಅರ್ಜಿಗೆ ಎನ್ಐಎ ವಿರೋಧ

ಸಾಂದರ್ಭಿಕ ಚಿತ್ರ
ಮುಂಬೈ ,ಜು.14: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ತನಿಖೆಯ ವರ್ಗಾವಣೆಯನ್ನು ಪ್ರಶ್ನಿಸಿ ಎಲ್ಗಾರ್ ಪರಿಷದ್ ಪ್ರಕರಣದ ಆರೋಪಿಗಳಾದ ಸುರೇಂದ್ರ ಗಡ್ಲಿಂಗ್ ಮತ್ತು ಸುಧೀರ ಧಾವಳೆ ಅವರು ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸಿರುವ ಎನ್ಐಎ,ಇದು ತನಿಖೆಯನ್ನು ವಿಫಲಗೊಳಿಸುವ ಪ್ರಯತ್ನವಾಗಿದೆ ಮತ್ತು ನಕ್ಸಲ್ ಪಿಡುಗು ಅನೇಕ ಹಂತಗಳಲ್ಲಿ ವಿನಾಶಕ್ಕೆ ಕಾರಣವಾಗಿದೆ ಎಂದು ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಿಳಿಸಿದೆ.
ಗಡ್ಲಿಂಗ್ ಮತ್ತು ಧಾವಳೆ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಎನ್ಐಎ ಅಫಿಡವಿಟ್ ಸಲ್ಲಿಸಿದ್ದು,ಕೇಂದ್ರ ಮತ್ತು ಮಹಾರಾಷ್ಟ್ರ ಸರಕಾರ ಇನ್ನೂ ತಮ್ಮ ಉತ್ತರಗಳನ್ನು ಸಲ್ಲಿಸಬೇಕಿವೆ ಎಂದು ಅವರ ಪರ ವಕೀಲ ಸತೀಶ ಬಿ.ತಳೇಕರ್ ಅವರು ನ್ಯಾಯಮೂರ್ತಿಗಳಾದ ಎಸ್.ಎಸ್.ಶಿಂದೆ ಮತ್ತು ಎನ್.ಜೆ.ಜಮಾದಾರ್ ಅವರ ಪೀಠಕ್ಕೆ ತಿಳಿಸಿದರು.
ಎನ್ಐಎ ಅಫಿಡವಿಟ್ ಸಲ್ಲಿಸಿರುವುದು ತನಗೆ ತಿಳಿದಿಲ್ಲ. ಎನ್ಐಎ ಪರ ಮೊದಲಿನ ವಕೀಲರು ಅದನ್ನು ಸಲ್ಲಿಸಿರಬೇಕು. ತಾನದನ್ನು ಪರಿಶೀಲಿಸಬೇಕು. ಹೀಗಾಗಿ ಒಂದು ವಾರದ ಸಮಯಾವಕಾಶ ನೀಡುವಂತೆ ಎನ್ಐಎ ಪರ ವಕೀಲ ಸಂದೇಶ ಪಾಟೀಲ್ ನ್ಯಾಯಾಲಯವನ್ನು ಕೇಳಿಕೊಂಡರು.
ನಿಷೇಧಿತ ಸಿಪಿಐ(ಮಾವೋವಾದಿ) ಜೊತೆಗೆ ನಂಟು ಹೊಂದಿದ್ದ ಆರೋಪದಲ್ಲಿ ಪುಣೆ ಪೊಲೀಸರು ದಾಖಲಿಸಿರುವ ಎಫ್ಆರ್ನಲ್ಲಿ ಹೆಸರಿಸಲಾಗಿರುವ ಆರೋಪಿಗಳಲ್ಲಿ ಗಡ್ಲಿಂಗ್ ಮತ್ತು ಧಾವಳೆ ಸೇರಿದ್ದಾರೆ. 2020,ಜ.24ರಂದು ಈ ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಲಾಗಿತ್ತು.
ಎನ್ಐಎ ಮುಂಬೈ ಶಾಖೆಯ ಎಸ್ಪಿ ವಿಕ್ರಮ ಖಲಾಟೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಈ ಇಬ್ಬರ ವಿರುದ್ಧದ ಆರೋಪಗಳು ಅನುಸೂಚಿತ ಆರೋಪಗಳಾಗಿರುವುದರಿಂದ ಕೇಂದ್ರೀಯ ಸಂಸ್ಥೆಗಳು ರಾಜ್ಯ ಪೊಲೀಸರಿಂದ ತನಿಖೆಯನ್ನು ವಹಿಸಿಕೊಳ್ಳಬಹುದು ಎಂದು ಅಫಿಡವಿಟ್ನಲ್ಲಿ ಹೇಳಿರುವ ಎನ್ಐಎ,ಅಪರಾಧದ ಗುರುತ್ವ ಮತ್ತು ಅಂತರರಾಜ್ಯ ಸಂಪರ್ಕ ಮತ್ತು ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಕೇಂದ್ರವು ತನಗೆ ಸ್ವಯಂಪ್ರೇರಿತ ನಿರ್ದೇಶ ನೀಡಿತ್ತು ಎಂದು ತಿಳಿಸಿದೆ.
ಎಫ್ಐಆರ್ ದಾಖಲಾದ ಎರಡು ವರ್ಷಗಳ ಬಳಿಕ ಪ್ರಕರಣವನ್ನು ಎನ್ಐಗೆ ವರ್ಗಾಯಿಸಲು ಯಾವುದೇ ಅನಿವಾರ್ಯ ಕಾರಣಗಳಿರಲಿಲ್ಲ ಮತ್ತು ತನಿಖೆಯು ಪೂರ್ಣಗೊಂಡು ವಿಚಾರಣೆ ಆರಂಭಗೊಳ್ಳಲಿರುವಾಗ ತನಿಖೆಯನ್ನು ವರ್ಗಾಯಿಸಲು ಕೇಂದ್ರ ಸರಕಾರಕ್ಕೆ ಅಧಿಕಾರವಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿರುವ ಗಡ್ಲಿಂಗ್ ಮತ್ತು ಧಾವಳೆ,ವಿಷಯದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲು ಮಹಾರಾಷ್ಟ್ರದ ಮಹಾವಿಕಾಸ ಅಘಾಡಿ ಸರಕಾರವು ಉದ್ದೇಶಿಸಿದಾಗ ದುರುದ್ದೇಶ ಮತ್ತು ರಾಜಕೀಯ ಸಮಯಸಾಧಕತನದಿಂದಾಗಿ ಪ್ರಕರಣವನ್ನು ವರ್ಗಾಯಿಸಲಾಗಿದೆ ಎಂದು ಹೇಳಿದ್ದಾರೆ.
2018,ಜ.1ರಂದು ಭೀಮಾ ಕೋರೆಗಾಂವ ಸ್ಮಾರಕಕ್ಕೆ ಭೇಟಿ ನೀಡಿದ್ದ ದಲಿತರ ಮೇಲಿನ ಹಲ್ಲೆಗೆ ಸಂಬಂಧಿಸಿದ ಎಫ್ಐಆರ್ನಲ್ಲಿ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಹಿಂದುತ್ವ ನಾಯಕರಾದ ಮಿಲಿಂದ ಏಕಬೋಟೆ ಮತ್ತು ಸಂಭಾಜಿ ಭಿಡೆ ಅವರನ್ನು ಹೆಸರಿಸಲಾಗಿದ್ದರೂ ಅವರಿಗೆ ಸರಕಾರದ ಕೃಪಾಶ್ರಯ ದೊರಕಿದೆ ಎಂದೂ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.
ಅರ್ಜಿಯಲ್ಲಿನ ಆರೋಪಗಳು ಅತಾರ್ಕಿಕವಾಗಿದ್ದು,ನ್ಯಾಯಾಲಯವನ್ನು ದಾರಿ ತಪ್ಪಿಸುವ ಏಕಮಾತ್ರ ಉದ್ದೇಶವನ್ನು ಹೊಂದಿವೆ ಮತ್ತು ತನ್ನ ತನಿಖೆಯನ್ನು ವಿಫಲಗೊಳಿಸುವ ಪ್ರಯತ್ನವಾಗಿದೆ ಎಂದು ಅಫಿಡವಿಟ್ನಲ್ಲಿ ತಿಳಿಸಿರುವ ಎನ್ಐಎ,ಜವಾಬ್ದಾರಿಯುತವಾಗಿ ಮತ್ತು ಅತ್ಯಂತ ವೃತ್ತಿಪರತೆಯಿಂದ ತನಿಖೆಯನ್ನು ನಡೆಸಲಾಗುತ್ತಿದೆ ಮತ್ತು ಆರೋಪಿಗಳ ವಿರುದ್ಧ ಸಾಕಷ್ಟು ಸಾಕ್ಷಾಧಾರಗಳಿವೆ, ಸರ್ವೋಚ್ಚ ನ್ಯಾಯಾಲಯವೂ ಇದನ್ನು ಒಪ್ಪಿಕೊಂಡಿದೆ ಎಂದು ಹೇಳುವ ಮೂಲಕ ಪ್ರಕರಣದ ವರ್ಗಾವಣೆಯನ್ನು ಸಮರ್ಥಿಸಿಕೊಂಡಿದೆ.







