ಗಲ್ವಾನ್ ನಲ್ಲಿ ಭಾರತ ಮತ್ತು ಚೀನಿ ಪಡೆಗಳ ನಡುವೆ ಮತ್ತೆ ಘರ್ಷಣೆ: ವರದಿಯನ್ನು ನಿರಾಕರಿಸಿದ ಭಾರತೀಯ ಸೇನೆ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ ,ಜು.14: ಚೀನಿ ಪಡೆಗಳು ಮತ್ತೊಮ್ಮೆ ಪೂರ್ವ ಲಡಾಖ್ ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ)ಯನ್ನು ದಾಟಿ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಿದ್ದವು ಮತ್ತು ಉಭಯ ಸೇನೆಗಳ ನಡುವೆ ಕನಿಷ್ಠ ಒಂದು ಘರ್ಷಣೆ ನಡೆದಿತ್ತು ಎಂದು ‘ಬಿಜಿನೆಸ್ ಸ್ಟಾಂಡರ್ಡ್’ ದೈನಿಕವು ವರದಿ ಮಾಡಿದ್ದು, ಭಾರತೀಯ ಸೇನೆಯು ಇದನ್ನು ಸ್ಪಷ್ಟವಾಗಿ ನಿರಾಕರಿಸಿದೆ.
ರಕ್ಷಣಾ ವಿಶ್ಲೇಷಕ ಅಜಯ ಶುಕ್ಲಾ ಅವರು ಸುದ್ದಿ ಜಾಲತಾಣ The Wire ಗಾಗಿ ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನವನ್ನು ಉಲ್ಲೇಖಿಸಿ ದೈನಿಕವು ಈ ವರದಿಯನ್ನು ಮಾಡಿದೆ. ಗಲ್ವಾನ್ ನದಿಗೆ ಸಮೀಪ,ಕಳೆದ ವರ್ಷದ ಜೂನ್ನಲ್ಲಿ 20 ಭಾರತೀಯ ಯೋಧರು ಸಾವನ್ನಪ್ಪಿದ್ದ ಹಿಂಸಾತ್ಮಕ ಘರ್ಷಣೆಗಳು ನಡೆದಿದ್ದ ಸ್ಥಳದ ಸಮೀಪವೇ ಮೇ 2ರಂದು ಹೊಸ ಘರ್ಷಣೆ ನಡೆದಿದೆ. ಇದರಲ್ಲಿ ಸಾವುನೋವುಗಳು ಸಂಭವಿಸಿವೆ ಎಂದು ಊಹಿಸಲಾಗಿದೆಯಾದರೂ ಅದು ಸ್ಪಷ್ಟವಾಗಿಲ್ಲ ಎಂದು ಶುಕ್ಲಾ ಸಂದರ್ಶನದಲ್ಲಿ ಹೇಳಿದ್ದಾರೆ. ವರದಿಯನ್ನು ಭಾರತೀಯ ಸೇನೆಯು ನಿರಾಕರಿಸಿದೆ.
ಈ ವರ್ಷದ ಫೆಬ್ರವರಿಯಲ್ಲಿ ಸೇನಾಪಡೆಗಳ ವಾಪಸಾತಿಗಾಗಿ ಒಪ್ಪಂದದ ಬಳಿಕ ಪಡೆಗಳನ್ನು ಹಿಂದೆಗೆದುಕೊಂಡ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಉಭಯ ಸೇನೆಗಳು ಪ್ರಯತ್ನಿಸಿಲ್ಲ. ವರದಿಯಲ್ಲಿ ಹೇಳಿರುವಂತೆ ಗಲ್ವಾನ್ ಅಥವಾ ಇತರ ಯಾವುದೇ ಪ್ರದೇಶದಲ್ಲಿ ಘರ್ಷಣೆ ನಡೆದಿಲ್ಲ ಎಂದು ಅದು ಬುಧವಾರ ಸ್ಪಷ್ಟಪಡಿಸಿದೆ. ಚೀನಾದೊಂದಿಗಿನ ಒಪ್ಪಂದಗಳು ಮುರಿದುಬಿದ್ದಿವೆ ಎಂದು ವರದಿಯಲ್ಲಿ ಹೇಳಿರುವುದು ಸುಳ್ಳು ಮತ್ತು ಆಧಾರರಹಿತವಾಗಿದೆ ಎಂದೂ ಸೇನೆಯು ತಿಳಿಸಿದೆ.
ಬಾಕಿ ಇರುವ ವಿಷಯಗಳನ್ನು ಇತ್ಯರ್ಥಗೊಳಿಸಲು ಉಭಯ ದೇಶಗಳ ನಡುವೆ ಮಾತುಕತೆಗಳು ಮತ್ತು ಎರಡೂ ಕಡೆಗಳ ಸೈನಿಕರಿಂದ ತಮ್ಮ ಪ್ರದೇಶಗಳಲ್ಲಿ ಗಸ್ತು ಕಾರ್ಯ ಮುಂದುವರಿದಿವೆ. ಗಡಿಯಲ್ಲಿ ಯಥಾಸ್ಥಿತಿಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಸೈನಿಕರ ಚಲನವಲನ ಸೇರಿದಂತೆ ಚೀನಿ ಸೇನೆಯ ಚಟುವಟಿಕೆಗಳ ಮೇಲೆ ಭಾರತೀಯ ಸೇನೆಯು ನಿಗಾಯಿರಿಸಿದೆ ಎಂದು ಹೇಳಿಕೆಯು ತಿಳಿಸಿದೆ.
ಚೀನಿ ಸೇನೆಯು ವಾಪಸಾತಿ ಒಪ್ಪಂದದಂತೆ ತೆರವುಗೊಳಿಸಿದ್ದ ಪ್ಯಾಂಗಾಂಗ್ ತ್ಸೋ ಸರೋವರದ ದಕ್ಷಿಣ ದಂಡೆಯಲ್ಲಿನ ಹಲವು ಪ್ರದೇಶಗಳನ್ನು ಪುನಃ ವಶಪಡಿಸಿಕೊಂಡಿದೆ ಎಂದು ದೈನಿಕವು ತನ್ನ ವರದಿಯಲ್ಲಿ ತಿಳಿಸಿದೆ. ತಜಿಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರ ನಡುವೆ ಮಾತುಕತೆಯ ದಿನವೇ ಸೇನೆಯ ಹೇಳಿಕೆ ಹೊರಬಿದ್ದಿದೆ.
ಗಲ್ವಾನ್ ನದಿಯ ತಿರುವಿನಲ್ಲಿಯ ಗಸ್ತು ಕೇಂದ್ರ 14ರ ಸಮೀಪ ಚೀನಿ ಸೈನಿಕರು ಟೆಂಟ್ವೊಂದನ್ನು ಸ್ಥಾಪಿಸಿದ್ದು,ಅದನ್ನು ತೆರವುಗೊಳಿಸುವಂತೆ ಭಾರತವು ಆಗ್ರಹಿಸಿದಾಗ ಉಭಯ ಸೇನೆಗಳ ನಡುವೆ ಘರ್ಷಣೆ ನಡೆದಿತ್ತು ಎಂದು ವರದಿಯು ಹೇಳಿದೆ. ಚೀನಾ ಎಲ್ಎಸಿ ಬಳಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದು ಇತರ ಮಾಧ್ಯಮಗಳು ವರದಿ ಮಾಡಿವೆಯಾದರೂ ಘರ್ಷಣೆ ನಡೆದಿರುವುದನ್ನು ಅವು ಉಲ್ಲೇಖಿಸಿಲ್ಲ.







