ಉಡುಪಿ : 120 ಮಂದಿಗೆ ಕೊರೋನ ಪಾಸಿಟಿವ್

ಉಡುಪಿ, ಜು.14: ಬುಧವಾರ ಜಿಲ್ಲೆಯಲ್ಲಿ 120 ಮಂದಿಯಲ್ಲಿ ಕೊರೋನ ಪಾಸಿಟಿವ್ ದೃಢಪಟ್ಟಿದೆ. ದಿನದಲ್ಲಿ 54 ಮಂದಿ ಚಿಕಿತ್ಸೆಯಿಂದ ಗುಣಮುಖ ರಾಗಿದ್ದು, ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 932ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಕೋವಿಡ್-19 ಸೋಂಕು ಇಂದು ಸಹ ಯಾವುದೇ ಬಲಿ ಪಡೆದಿಲ್ಲ. ಹೀಗಾಗಿ ಇದುವರೆಗೆ ಮೃತರ ಸಂಖ್ಯೆ 402ರಲ್ಲಿದೆ. ಕೊರೋನ ಪಾಸಿಟಿವ್ ದೃಢಪಟ್ಟ 120 ಮಂದಿಯಲ್ಲಿ 58 ಮಂದಿ ಪುರುಷರು ಹಾಗೂ 62 ಮಂದಿ ಮಹಿಳೆಯರು. ಉಡುಪಿ ತಾಲೂಕಿನ 54, ಕುಂದಾಪುರ ತಾಲೂಕಿನ 18, ಕಾರ್ಕಳ ತಾಲೂಕಿನ 46 ಮಂದಿ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ. ಇವರಲ್ಲಿ 16 ಮಂದಿ ಕೋವಿಡ್ ಆಸ್ಪತ್ರೆ ಹಾಗೂ ಉಳಿದ 104 ಮಂದಿ ಮನೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
ಮಂಗಳವಾರ 54 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 66,555ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 3482 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಈಗ 67,889ಕ್ಕೇರಿದೆ ಎಂದು ಡಾ.ಉಡುಪ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 7,22,241 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.
ಓರ್ವನಲ್ಲಿ ಕಪ್ಪು ಫಂಗಸ್ ಸೋಂಕು: ಹೊರಜಿಲ್ಲೆಯ ಒಬ್ಬನಲ್ಲಿ ಇಂದು ಕಪ್ಪು ಫಂಗಸ್ ಸೋಂಕು ಪತ್ತೆಯಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸೇರಿಸಲಾಗಿದೆ. ಹೀಗಾಗಿ ಸದ್ಯ ಏಳು ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಡಾ.ಉಡುಪ ತಿಳಿಸಿದರು.







