ಕಳವು ಪ್ರಕರಣ: 6.88 ಲಕ್ಷ ರೂ.ಮೌಲ್ಯದ 12 ವಾಹನಗಳ ವಶ, ಮೂವರ ಬಂಧನ

ಬೆಂಗಳೂರು, ಜು.14: ನಕಲಿ ಕೀ ಬಳಸಿ ಇಲ್ಲವೆ ಹ್ಯಾಂಡಲ್ ಬೀಗ ಮುರಿದು ಬೈಕ್ ಹಾಗೂ ಕಾರುಗಳ ಕಳವು ಮಾಡುತ್ತಿದ್ದ ಮೂವರು ಕುಖ್ಯಾತ ಕಳ್ಳರನ್ನು ಬಂಧಿಸಿರುವ ಉತ್ತರ ವಿಭಾಗದ ಪೊಲೀಸರು 6.88 ಲಕ್ಷ ರೂ.ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳಿಂದ 10 ದ್ವಿಚಕ್ರ ವಾಹನಗಳು, 1 ಆಟೋ ಸೇರಿ 11 ವಾಹನಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ. ಕಳೆದ ಮೇ 31 ರಂದು ನಂದಿನಿ ಲೇಔಟ್‍ನ ನಂಜುಡೇಶ್ವರ ನಗರದ ಬಳಿಯ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣವನ್ನು ದಾಖಲಿಸಿಕೊಂಡ ನಂದಿನಿ ಲೇಔಟ್ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.
ಅದರಂತೆ ಕಳೆದ ಜು.11 ರಂದು ಲಗ್ಗೆರೆಯ ಕೃಷ್ಣಭವನ್ ಹೋಟೆಲ್ ಮುಂಬಾಗ ಹೋಂಡಾ ಡಿಯೋ ಸ್ಕೂಟರ್‍ನಲ್ಲಿ ಅನುಮಾನಾಸ್ಪದವಾಗಿ ಬಂದ ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ವಾಹನ ಕಳವು ಮಾಡುತ್ತಿರುವುದನ್ನು ಬಾಯ್ಬಿಟ್ಟಿದ್ದಾರೆ. ಈ ಮೂವರು ಆರೋಪಿಗಳು ಈ ಮೊದಲೇ ವಾಹನಗಳ ಕಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದರು. ಆರೋಪಿಗಳ ಬಂಧನದಿಂದ 12 ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ.





