ಆಗಸ್ಟ್ ಅಂತ್ಯಕ್ಕೆ 4 ಕೋಟಿ ಮಂದಿಗೆ ಕೋವಿಡ್ ಲಸಿಕೆ : ಸಚಿವ ಡಾ. ಸುಧಾಕರ್
'ರಾಜ್ಯದಲ್ಲಿ ಲಸಿಕೆ ಕೊರತೆ ಇಲ್ಲ'

ಹೆಬ್ರಿ, ಜು.14: ಪ್ರತಿನಿತ್ಯ ರಾಜ್ಯದಲ್ಲಿ ಮೂರು ಲಕ್ಷ ಲಸಿಕೆಯನ್ನು ನೀಡಲಾಗುತ್ತಿದೆ. ಒಂದೆರಡು ದಿನ ಏನಾದರೂ ಸರಬರಾಜಿನಲ್ಲಿ ವ್ಯತ್ಯಾಸ ವಾದರೂ ಬೇಗನೆ ಅದು ಸರಿಹೋಗುತ್ತದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಹೆಬ್ರಿಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಈ ತಿಂಗಳು ಹಾಗೂ ಮುಂದಿನ ತಿಂಗಳು ರಾಜ್ಯಕ್ಕೆ ಒಂದು-ಒಂದೂವರೆ ಕೋಟಿ ಯಷ್ಟು ಲಸಿಕೆ ಬರಲಿದ್ದು, ಆಗಸ್ಟ್ ಅಂತ್ಯದ ವೇಳೆಗೆ ರಾಜ್ಯದ ನಾಲ್ಕು ಕೋಟಿ ಜನರಿಗೆ ಲಸಿಕೆಯನ್ನು ನೀಡಲಿದ್ದೇವೆ ಎಂದರು.
ನಾವೆಲ್ಲರೂ ಒಗ್ಗಟ್ಟಾಗಿ, ಸಾಮೂಹಿಕ ಜವಾಬ್ದಾರಿಯನ್ನು ತೆಗೆದುಕೊಂಡು ಪ್ರತಿಯೊಬ್ಬರು ಅವರವರ ಜವಾಬ್ದಾರಿಯನ್ನು ಅವರೇ ಹೊತ್ತರೆ ಖಂಡಿತವಾಗಿ ರಾಜ್ಯದಲ್ಲಿ ಮೂರನೇ ಅಲೆಯನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜಕೀಯ ಸಮಾರಂಭ ನಡೆಯುತ್ತಿಲ್ಲ: ಈಗ ಯಾವುದೇ ರಾಜಕೀಯ ಸಮಾರಂಭಗಳು ನಡೆಯುತ್ತಿಲ್ಲ. ಹೀಗಾಗಿ ರಾಜಕಾರಣಿಗಳನ್ನು, ಜನ ಪ್ರತಿನಿಧಿಗಳನ್ನು ಕೋವಿಡ್ ಹರಡಲು ಕಾರಣ ಎಂದು ಸುಮ್ಮನೆ ದೂರಬೇಡಿ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.







