ಕರಾವಳಿಯಲ್ಲಿ ಮುಂದುವರಿದ ಮಳೆ : ಜು.16ರಂದು ರೆಡ್ ಅಲರ್ಟ್ ಘೋಷಣೆ
ಕುಮಾರಧಾರಾ ಸ್ನಾನಘಟ್ಟ ಮುಳುಗಡೆ

ಮಂಗಳೂರು, ಜು.14: ಬಂಗಾಳ ಕೊಲ್ಲಿ ಸಮುದ್ರದಲ್ಲಿ ಸಂಭವಿಸಿದ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ಕರಾವಳಿ ಭಾಗದಲ್ಲಿ ನಿರಂತರ ವರ್ಷಧಾರೆ ಸುರಿಯುತ್ತಿದೆ. ಜು.18ರವರೆಗೂ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜು.16ರಂದು ದ.ಕ. ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಜಿಲ್ಲೆಯಾದ್ಯಂತ ಕಳೆದ ಐದಾರು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಕುಮಾರಧಾರಾ, ನೇತ್ರಾವತಿ ನದಿ ತುಂಬಿ ಹರಿಯತೊಡಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಮೀಪದ ಕುಮಾರಧಾರಾ ಸ್ನಾನ ಘಟ್ಟ ಸಂಪೂರ್ಣ ಮುಳುಗಡೆಯಾಗಿದೆ.
ಶಿರಾಡಿ ಘಾಟಿ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ನದಿ ತುಂಬಿ ಹರಿಯುತ್ತಿದೆ. ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕುಮಾರಧಾರಾ, ನೇತ್ರಾವತಿ, ಪಲ್ಗುಣಿ, ಪಯಸ್ವಿನಿ, ಗುರುಪುರ, ಗುಂಡ್ಯ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಕುಮಾರಧಾರಾ ನದಿಗೆ ಇಳಿಯಲಾಗದೆ ರಸ್ತೆಗೆ ಬಂದಿರುವ ನೆರೆನೀರಿನಲ್ಲಿ ತೀರ್ಥಸ್ನಾನ ನೆರ ವೇರಿಸುತ್ತಿದ್ದಾರೆ. ನದಿಯ ದಡದಲ್ಲಿ ತೀರ್ಥಸ್ನಾನ ಮಾಡಲು ಭಕ್ತರಿಗೆ ಅವಕಾಶ ನೀಡಲಾಗಿದ್ದು, ನದಿಗೆ ಇಳಿಯದಂತೆ ಎಚ್ಚರಿಕೆ ಸಂದೇಶ ನೀಡಲಾಗಿದೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಹಾಗೆಯೇ ಧರ್ಮಸ್ಥಳದಲ್ಲಿಯೂ ನೇತ್ರಾವತಿ ನದಿಯಲ್ಲಿ ನೀರು ಏರಿಕೆಯಾಗಿದ್ದು, ತೀರ್ಥಸ್ನಾನ ಮಾಡುವವರಿಗೆ ನದಿಗೆ ಇಳಿಯದಂತೆ ಸ್ಥಳದಲ್ಲಿ ಸಿಬ್ಬಂದಿ ಸೂಚನೆ ನೀಡುತ್ತಿದ್ದಾರೆ. ಘಟ್ಟ ಪ್ರದೇಶಗಳಲ್ಲಿ ಮಳೆಯಾದ ವೇಳೆ ನದಿಯಲ್ಲಿ ಆಗಿಂದಾಗ್ಗೆ ನೆರೆನೀರು ಬರುವುದರಿಂದ ನದಿಗೆ ಇಳಿಯು ವುದು, ಈಜಾಡುವುದಕ್ಕೆ ಅವಕಾಶ ನೀಡಿಲ್ಲ. ಭಕ್ತರು ಮುಂಜಾಗ್ರತೆ ವಹಿಸುವಂತೆ ಸ್ಥಳದಲ್ಲಿ ಬಂದೋಬಸ್ತ್ ಮಾಡಲಾಗಿದೆ.
ನಿರಂತರವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಅಲ್ಲಲ್ಲಿ ಮನೆ, ಗಿಡ-ಮರ, ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಮನೆಯೊಂದು ಸಂಪೂರ್ಣ ಕುಸಿದಿದ್ದು, ಅಪಾರ ಹಾನಿ ಸಂಭವಿಸಿದೆ. ಅಲ್ಲದೆ, ಎಂಟು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮಂಗಳೂರು ತಾಲೂಕಿನ ತೆಂಕ ಉಳಿಪ್ಪಾಡಿಯ ಮಾಧವ ಎಂಬವರ ಮನೆಗೆ ಭಾಗಶಃ ಹಾನಿಯಾಗಿದೆ.
ಬಡಗ ಎಡಪದವು ಗ್ರಾಮದ ಉಕ್ಕಿ ಎಂಬಲ್ಲಿ ಗ್ರಾಪಂ ರಸ್ತೆಗೆ ಮರ ಬಿದ್ದು, ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಮರಬಿದ್ದ ಕೆಲವೇ ಸಮಯದಲ್ಲಿ ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಮರವನ್ನು ತೆರವುಗೊಳಿಸಿದರು.
ಏರ್‌ಪೋರ್ಟ್ ರಸ್ತೆಯಲ್ಲಿ ಮುಕ್ಕಾಲು ಗಂಟೆ ಸಂಚಾರಕ್ಕೆ ತಡೆ: ಮಂಗಳೂರಿನಿಂದ ಬಜ್ಪೆಯ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗದ ಪದವಿನಂಗಡಿ ದ್ವಿಪಥ ರಸ್ತೆಯಲ್ಲಿ ಸಂಜೆ ವೇಳೆ ಬೃಹತ್ ತೆಂಗಿನಮರ ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ಈ ವೇಳೆ ಸ್ಥಳೀಯರ ಸಹಕರಾದೊಂದಿಗೆ ಪೊಲೀಸರು ಮರ ತೆರವುಗೊಳಿಸಿದರು. ಈ ವೇಳೆ ಮರ ಎಳೆಯುವ ರಭಸಕ್ಕೆ ಪಕ್ಕದಲ್ಲಿದ್ದ ಮೀನಿನ ಶೆಡ್ ಬಿದ್ದಿದೆ. ಪರಿಣಾಮ ಶೆಡ್‌ನಲ್ಲಿನ ವ್ಯಕ್ತಿಗೆ ತರಚು ಗಾಯಗಳಾಗಿವೆ. ಗಾಯಾಳು ವ್ಯಕ್ತಿಗೆ ಸ್ಥಳದಲ್ಲೇ ಪೊಲೀಸರು ಪ್ರಥಮ ಚಿಕಿತ್ಸೆ ನೀಡಿ ಸತ್ಕರಿಸಿದರು.
ಏರ್‌ಪೋರ್ಟ್ ರಸ್ತೆ ಸದಾ ಗಿಜಿಗಿಡುತ್ತಾ ಇತ್ತು. ಆದರೆ ಬುಧವಾರ ಸಂಜೆ ರಸ್ತೆಗೆ ಅಡ್ಡಲಾಗಿ ತೆಂಗಿನಮರ ಬಿದ್ದ ಪರಿಣಾಮ ಮುಕ್ಕಾಲು ಗಂಟೆ ವಾಹನಗಳ ಸಂಚಾರಕ್ಕೆ ಅಡೆತಡೆ ಉಂಟಾಗಿತ್ತು. ಇದರಿಂದ ವಾಹನಗಳ ಸವಾರರು ಸಾಕಷ್ಟು ಪ್ರಯಾಸ ಪಡುವಂತಾಯಿತು.
ಮೀನುಗಾರರಿಗೆ ಎಚ್ಚರಿಕೆ: ಕರ್ನಾಟಕದ ಕರಾವಳಿ ತೀರ ಪ್ರದೇಶಗಳಲ್ಲಿ ಗಾಳಿಯ ವೇಗವು ಪ್ರತೀ ಗಂಟೆಗೆ 40ರಿಂದ 50 ಕಿ.ಮೀ. ಇರುವ ಸಾಧ್ಯತೆ ಇದೆ. ಜು.16ರಂದು ಬೆಳಗ್ಗೆ 8:30ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಮಂಗಳೂರಿನಿಂದ ಕಾರವಾರದವರೆಗೆ ಕರ್ನಾಟಕದ ಕರಾವಳಿಯಲ್ಲಿ ಜು.15ರಂದು ರಾತ್ರಿ 11:30ರವರೆಗೆ 2.5ರಿಂದ 4 ಮೀ. ವ್ಯಾಪ್ತಿಯಲ್ಲಿ ಹೆಚ್ಚಿನ ಅಲೆಗಳು ಅಪ್ಪಳಿಸಲಿವೆ. ಮೇಲ್ಮೈ ಪ್ರವಾಹ ವೇಗವು ಸೆಕೆಂಡಿಗೆ 67ರಿಂದ 87 ಸೆಂ.ಮೀ. ನಡುವೆ ಬದಲಾಗುತ್ತದೆ. ಇನ್ನು ಎರಡು ದಿನ ಗರಿಷ್ಠ ಹಾಗೂ ಕನಿಷ್ಠ ತಾಪಮಾನವು ಕ್ರಮವಾಗಿ ಅಂದಾಜು 25 ಮತ್ತು 20 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಬುಧವಾರ ಕೂಡ ವ್ಯಾಪಕ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 13 ಸೆ.ಮೀ. (ಅತಿಹೆಚ್ಚು), ಸುಬ್ರಹ್ಮಣ್ಯದಲ್ಲಿ 10 ಸೆ.ಮೀ. ಹಾಗೂ ಸುಳ್ಯ, ಉಪ್ಪಿನಂಗಡಿ ಸೇರಿದಂತೆ ದ.ಕ. ಜಿಲ್ಲೆಯಲ್ಲಿ 9 ಸೆ.ಮೀ. ಮಳೆ ದಾಖಲಾಗಿದೆ.
ಡ್ಯಾಂಗಳಲ್ಲಿ ಒಳಹರಿವು ಹೆಚ್ಚಳ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲ ನದಿಗಳು ತುಂಬಿ ಹರಿಯುತ್ತಿವೆ. ಪರಿಣಾಮ ಡ್ಯಾಮ್ ಗಳಿಗೂ ಸಾಕಷ್ಟು ಪ್ರಮಾಣದ ಮಳೆನೀರು ಹರಿದುಬರುತ್ತಿದೆ. ಬಂಟ್ವಾಳದ ಎಎಂಆರ್ ಡ್ಯಾಂಗೆ 45,932 ಕ್ಯುಸೆಕ್ಸ್ ನೀರು ಒಳ ಹರಿವು ಇದೆ. ಮೂರು ಗೇಟ್‌ಗಳಿಂದ ಅಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ತುಂಬೆ ಡ್ಯಾಮ್‌ನಲ್ಲೂ 45 ಸಾವಿರ ಕ್ಯೂಸೆಕ್ಸ್ ನೀರಿನ ಒಳಹರಿವಿದೆ. 15 ಗೇಟ್‌ಗಳ ಮೂಲಕ ನೀರನ್ನು ಹೊರಬಿಡಲಾಗುತ್ತಿದೆ. ನೀರಕಟ್ಟೆಯ ಸಾಗರ ಡ್ಯಾಂಗೆ ಸೆಕೆಂಡ್‌ಗೆ 911 ಘನ ಮೀಟರ್ ನೀರಿನ ಒಳಹರಿವಿದೆ. ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.
ಜು.16: ರೆಡ್ ಅಲರ್ಟ್ ಘೋಷಣೆ
ಕರಾವಳಿ ಭಾಗ, ಉತ್ತರ ಹಾಗೂ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ 14ರಿಂದ 18ರಿಂದ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ, ಉಡುಪಿ, ದ.ಕ., ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು ಜಿಲ್ಲೆಯ ಕೆಲ ಭಾಗಗಳಲ್ಲಿ ಅಧಿಕ ಹಾಗೂ ಅತ್ಯಧಿಕ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜು.14, 15 ಹಾಗೂ 17ರಂದು ಆರೆಂಜ್ ಅಲರ್ಟ್ ಹಾಗೂ ಜು.16ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ರಾಜ್ಯ ನಿರ್ದೇಶಕ ಹಾಗೂ ವಿಜ್ಞಾನಿ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.









