ಕನಿಷ್ಠ ಶುಲ್ಕ ಕೇಳುವುದು ಖಾಸಗಿ ಶಾಲೆಗಳ ತಪ್ಪಾ: ಶಶಿಕುಮಾರ್
ಬೆಂಗಳೂರು, ಜು.14: ಅನುದಾನ ರಹಿತ ಖಾಸಗಿ ಶಾಲೆಗಳು ಕನಿಷ್ಟ ಶುಲ್ಕ ಕೇಳುವುದೇ ತಪ್ಪು ಎನ್ನುವ ರೀತಿಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ವರ್ತನೆ ತೋರುತ್ತಿರುವುದು ಸರಿಯಲ್ಲವೆಂದು ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಲವು ಪೋಷಕರು ಕಳೆದ ಎರಡು ವರ್ಷಗಳಿಂದ ಶಾಲಾ ಶುಲ್ಕ ಕಟ್ಟಿಲ್ಲ. ಇದನ್ನು ಕೇಳುವುದು ತಪ್ಪಾ. ಶುಲ್ಕದ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಸಾರ್ವಜನಿಕವಾಗಿ ತಪ್ಪು ಅಭಿಪ್ರಾಯವನ್ನು ಮೂಡಿಸುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅನುದಾನ ರಹಿತ ಖಾಸಗಿ ಶಾಲೆಗಳು ಪೋಷಕರಿಂದ ಶಾಲಾ ಶುಲ್ಕವನ್ನೇ ಪಡೆಯದಿದ್ದರೆ ಶಿಕ್ಷಕರಿಗೆ ವೇತನ ನೀಡುವುದು ಹೇಗೆ. ಹಾಗೂ ಶಿಕ್ಷಣ ಇಲಾಖೆ ಪರೀಕ್ಷಾ ಕಾರ್ಯಕ್ಕೆ ಹಾಗೂ ಮೌಲ್ಯಮಾಪನಕ್ಕೆ ಖಾಸಗಿ ಶಿಕ್ಷಕರ ಬೇಡಿಕೆ ಇಟ್ಟಿದೆ. ಆದರೆ, ಇಲಾಖೆಯ ಅಧಿಕಾರಿಗಳು ಖಾಸಗಿ ಶಾಲೆಗಳು ಶುಲ್ಕವನ್ನು ಪಡೆಯುವುದನ್ನು ವಿರೋಧಿಸುತ್ತಿರುವಾಗ ನಮ್ಮ ಶಾಲೆಯ ಶಿಕ್ಷಕರು ಪರೀಕ್ಷಾ ಕಾರ್ಯದಲ್ಲಿ ತೊಡಗುವುದಾದರು ಹೇಗೆಂದು ಅವರು ಪ್ರಶ್ನಿಸಿದ್ದಾರೆ.





