ಸುರತ್ಕಲ್: ಮನೆಗೆ ನುಗ್ಗಿ 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು
ಮಂಗಳೂರು, ಜು.14: ಸುರತ್ಕಲ್‌ನ ಕಾನ ಸಮೀಪದ ಮನೆಯೊಂದಕ್ಕೆ ನುಗ್ಗಿದ ಆಗಂತುಕರು 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಗೈದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾನ ನಿವಾಸಿ ಲಕ್ಷ್ಮಣ ಮೂಲ್ಯ ಎಂಬವರ ಮನೆ ಕಳವಾಗಿರುವುದು ಬೆಳಕಿಗೆ ಬಂದಿದೆ. ಎಚ್‌ಪಿಸಿಎಲ್ ಕಂಪೆನಿ ಉದ್ಯೋಗಿಯಾಗಿರುವ ಲಕ್ಷ್ಮಣ ಮೂಲ್ಯ ಜು.10ರಂದು ಸಂಜೆ ಬಂಟ್ವಾಳದ ಅತ್ತೆ ಮನೆಗೆ ತೆರಳಿದ್ದರು. ಮರುದಿನ ಬಂದಾಗ ಮನೆಯಿಂದ ಕಳವಾಗಿರುವುದು ಬೆಳಕಿಗೆ ಬಂದಿತ್ತು.
ಬೆಡ್‌ರೂಮಿನ ಮೂರು ಕಪಾಟಿನಲ್ಲಿದ್ದ ಚಿನ್ನದ ಸರ, ಕರಿಮಣಿ ಸರ, ಚೈನ್, ಹವಳದ ಸರ, ಚಿನ್ನದ ಬಳೆ, ಕಿವಿಯೋಲೆ, ಚಿನ್ನದ ಉಂಗುರ ಕಳವಾಗಿದೆ. ಕಳ್ಳತನ ಮಾಡಲು ಪಿಕ್ಕಾಸು ಬಳಸಿ ಮನೆಯ ಬಾಗಿಲು ಪುಡಿ ಮಾಡಿದ್ದಾರೆ. ಮನೆಯ ಮುಖ್ಯ ದ್ವಾರದ ಮುಂಭಾಗ ಸುರಕ್ಷತೆಯ ಹಿತದೃಷ್ಟಿಯಿಂದ ಅಳವಡಿಸಿದ ಸ್ಟೀಲ್ ಬಾಗಿಲಿನ ಬೀಗವನ್ನು ಅಂಗಳದಲ್ಲಿ ಎಸೆದು ಹೋಗಿದ್ದಾರೆ. ಕಳವಾದ ಸುಮಾರು 288 ಗ್ರಾಂ ತೂಕದ ಒಡವೆಗಳ ಅಂದಾಜು ಮೌಲ್ಯ ಸುಮಾರು 14 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಇದೇ ಸಂದರ್ಭ ಸಮೀಪದ ಇನ್ನೊಂದು ಮನೆಗೂ ಕಳ್ಳರು ಕನ್ನ ಹಾಕಿದ್ದು, ಈ ಮನೆಯ ಮಾಲಕರು ಇನ್ನಷ್ಟೇ ದೂರು ನೀಡಬೇಕಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಲಾಭ ಪಡೆದುಕೊಂಡು ಕಳ್ಳತನಕ್ಕಿಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.





