ರಾಜ್ಯದ ಕೆರೆಗಳ ಸರ್ವೇಗೆ ನಿರ್ದೇಶನ ನೀಡಿ: ಸರಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು, ಜು.14: ರಾಜ್ಯದ ಎಲ್ಲ ಕೆರೆಗಳು ಮತ್ತು ಬಫರ್ ಝೋನ್‍ಗಳ ಸರ್ವೇ ನಡೆಸುವಂತೆ ಎಲ್ಲ್ಲ ಡಿಸಿಗಳಿಗೂ ನಿರ್ದೇಶನ ನೀಡುವಂತೆ ಸರಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಇದೇ ವೇಳೆ, ಕರ್ನಾಟಕ ಕೆರೆ ಸಂರಕ್ಷಣಾ ಪ್ರಾಧಿಕಾರಕ್ಕೂ ನೋಟಿಸ್ ಜಾರಿ ಮಾಡಿದೆ.
ಕೆರೆಗಳ ಸುತ್ತ 30 ಮೀಟರ್ ಬಫರ್ ಝೋನ್ ನಿಗದಿಪಡಿಸಲಾಗಿದೆ. ರಾಜ್ಯಗಳ ಕೆರೆಗಳ ರಕ್ಷಣೆ ಸರಕಾರದ ಹೊಣೆ. ಭೂ ಕಂದಾಯ ಕಾಯ್ದೆ-104 ಅಡಿ ಕ್ರಮ ಕೈಗೊಳ್ಳಬೇಕು. ಕೆರೆಗಳ ಒತ್ತುವರಿಯಾಗಿದ್ದರೆ ತೆರವುಗೊಳಿಸಬೇಕು. ಬಫರ್ ಝೋನ್‍ನಲ್ಲಿನ ನಿರ್ಮಾಣಗಳನ್ನು ತೆರವುಗೊಳಿಸಬೇಕು ಎಂದು ಆದೇಶಿಸಿರುವ ನ್ಯಾಯಪೀಠವು ಈ ಬಗ್ಗೆ ಡಿಸಿಗಳಿಗೆ ನಿರ್ದೇಶನ ನೀಡಲು ರಾಜ್ಯ ಸರಕಾರಕ್ಕೆ ಆದೇಶ ನೀಡಿದೆ.
ಭೂ ಕಂದಾಯ ಕಾಯ್ದೆಯಡಿ ನಿರ್ದೇಶನಕ್ಕೆ ಆದೇಶಿಸಿರುವ ನ್ಯಾಯಪೀಠ, ಅಕ್ರಮ ನಿರ್ಮಾಣಗಳ ತೆರವಿಗೆ ಪಾಲಿಕೆಗಳಿಗೂ ನಿರ್ದೇಶನ ನೀಡಿದೆ. ಮಾಲಿನ್ಯ ರಹಿತ ವಾತಾವರಣದಲ್ಲಿ ಬದುಕುವುದು ಹಕ್ಕು. ಕೆರೆಗಳು ನಮ್ಮ ಪರಿಸರದ ಒಂದು ಪ್ರಮುಖ ಭಾಗ. ಕೆರೆ ಪುನರುಜ್ಜೀವನ ಗೊಳಿಸದಿದ್ದರೆ ಈ ಹಕ್ಕು ಹರಣವಾದಂತೆ. ಹೀಗಾಗಿ, ಕೆರೆಗಳನ್ನು ರಕ್ಷಿಸುವುದೂ ಎಲ್ಲರ ಕರ್ತವ್ಯ ಎಂದು ನ್ಯಾಯಪೀಠವು ತಿಳಿಸಿದೆ.





