ಬಿಬಿಎಂಪಿ ವ್ಯಾಪ್ತಿಯಲ್ಲಿ ತೆರಿಗೆ ಪಾವತಿ ಮಾಡದಿದ್ದರೆ ಆಸ್ತಿ ಸೀಲ್: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

ಬೆಂಗಳೂರು, ಜು.14: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಲು ನಿರ್ಲಕ್ಷ್ಯ ತೋರುತ್ತಿರುವ ಮಾಲಕರ ಆಸ್ತಿಗಳನ್ನು ಶೀಘ್ರದಲ್ಲಿಯೇ ಸೀಲ್ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್, ಕೋವಿಡ್ ಕಾರಣದಿಂದಾಗಿ ಈಗಾಗಲೇ ಆಸ್ತಿ ತೆರಿಗೆ ಅವಧಿಯನ್ನು ವಿಸ್ತರಣೆ ಮಾಡಿ ಸಾಕಷ್ಟು ಅವಕಾಶ ನೀಡಲಾಗಿದೆ. ಹೀಗಿದ್ದರೂ, ಪಾವತಿ ಮಾಡದೆ ನಿರ್ಲಕ್ಷ್ಯ ವಹಿಸಿರುವ ಆಸ್ತಿಗಳಿಗೆ ಸೀಲ್ ಮಾಡಿ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಿಬಿಎಂಪಿಗೆ ಆಸ್ತಿ ತೆರಿಗೆಯೇ ಮೂಲ ಆದಾಯವಾಗಿದೆ. ಕಳೆದ ಪಾಲಿಕೆ ಬಜೆಟ್‍ನಲ್ಲಿಯೂ 2 ಸಾವಿರ ಕೋಟಿ ರೂ.ಗಿಂತಲೂ ಅಧಿಕ ಆಸ್ತಿ ತೆರಿಗೆ ಶೇಖರಣೆ ಆಗಿದೆ. ಆದರೆ, ಈ ಬಾರಿ ಆಸ್ತಿ ತೆರಿಗೆಯೂ ನಿರೀಕ್ಷೆಯ ಮಟ್ಟವನ್ನು ತಲುಪಿಲ್ಲ. ಈ ಸಂಬಂಧ ಈಗಾಗಲೇ ಕಂದಾಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಲವು ನಿರ್ದೇಶನ ನೀಡಿದ್ದು, ಸೀಲ್ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.





