ಶಸ್ತ್ರಚಿಕಿತ್ಸೆಯ ಬಳಿಕ ವ್ಯಾಟಿಕನ್ ಗೆ ಮರಳಿದ ಪೋಪ್ ಫ್ರಾನ್ಸಿಸ್

photo :twitter/@Pontifex
ವೆಟಿಕನ್, ಜು.14: ರೋಮ್ ನ ಆಸ್ಪತ್ರೆಯಲ್ಲಿ ಜುಲೈ 4ರಂದು ಕರುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಪೋಪ್ ಫ್ರಾನ್ಸಿಸ್ ಚೇತರಿಸಿಕೊಂಡ ಬಳಿಕ ಬುಧವಾರ ವ್ಯಾಟಿಕನ್ ಗೆ ಮರಳಿರುವುದಾಗಿ ಮೂಲಗಳು ಹೇಳಿವೆ. ರೋಮ್ನ ಗೆಮೆಲ್ಲಿ ವಿವಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿರುವ 84 ವರ್ಷದ ಪೋಪ್ ಫ್ರಾನ್ಸಿಸ್ ವೆಟಿಕನ್ನ ತಮ್ಮ ನಿವಾಸಕ್ಕೆ ಆಗಮಿಸಿದ್ದಾರೆ.
ರೋಮ್ನಿಂದ ಹಿಂತಿರುಗುವ ಮುನ್ನ ಅವರು ಸಂತಾ ಮರಿಯಾ ಬೆಸಿಲಿಕ ಹಾಗೂ ಸೆಂಟ್ರಲ್ ರೋಮ್ ಚರ್ಚ್ನಲ್ಲಿ ಪ್ರಾರ್ಥನೆ ನಡೆಸಿ, ಎಲ್ಲಾ ರೋಗಿಗಳ, ಅದರಲ್ಲೂ ಮುಖ್ಯವಾಗಿ ತಾನು ಆಸ್ಪತ್ರೆಯಲ್ಲಿದ್ದಾಗ ತನ್ನನ್ನು ಭೇಟಿಯಾದವರ ಒಳಿತಿಗಾಗಿ ಪ್ರಾರ್ಥಿಸಿದರು ಎಂದು ವೆಟಿಕನ್ ವಕ್ತಾರ ಮ್ಯಾಟಿಯೊ ಬ್ರೂನಿ ಹೇಳಿದ್ದಾರೆ. ಆಸ್ಪತ್ರೆಯಲ್ಲಿದ್ದಾಗಲೂ ಪೋಪ್ ಕೆಲವು ಕಾರ್ಯಗಳನ್ನು ಮಾಡುತ್ತಿದ್ದರು. ವ್ಯಾಟಿಕನ್ ನಿಂದ ದೂರವಿದ್ದರೂ ಪ್ರಧಾನ ಗುರುವಿನ ಅಧಿಕಾರವನ್ನು ಉಳಿಸಿಕೊಂಡಿದ್ದರು. ಅವರು ಶೀಘ್ರವೇ ತಮ್ಮ ಮಾಮೂಲಿ ದೈನಂದಿನ ಕಾರ್ಯಕ್ರಮ ಮರಳಿ ಆರಂಭಿಸುವ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಮೂಲಗಳು ಹೇಳಿವೆ.





