ಕೆಲವು ಷರತ್ತುಗಳಿಗೆ ಬದ್ಧವಾಗಿ ಕೆಲಸದ ಸ್ಥಳದಲ್ಲಿ ಹಿಜಾಬ್ ನಿಷೇಧಿಸಬಹುದು: ಯುರೋಪಿಯನ್ ಯೂನಿಯನ್ ಕೋರ್ಟ್ ನ ತೀರ್ಪು

ಲಕ್ಸೆಂಬರ್ಗ್, ಜು.15: ಧಾರ್ಮಿಕ ಅಥವಾ ರಾಜಕೀಯ ನಂಬಿಕೆಗಳ ಪ್ರತೀಕವಾದ ಗುರುತುಗಳನ್ನು ಉದ್ಯೋಗಿಗಳು ಧರಿಸುವುದನ್ನು ನಿಷೇಧಿಸಬಹುದು ಎಂದು ಯುರೋಪಿಯನ್ ಯೂನಿಯನ್ನ ಸವೋಚ್ಛ ನ್ಯಾಯಾಲಯ ತೀರ್ಪು ನೀಡಿದೆ. ಈ ನಿಷೇಧದಿಂದ ಉದ್ಯೋಗಿಗಳ ಪ್ರಾಮಾಣಿಕ ಅಗತ್ಯಗಳಿಗೆ ತೊಂದರೆಯಾಗದಂತೆ ಒಕ್ಕೂಟದ 27 ಸದಸ್ಯ ರಾಷ್ಟ್ರಗಳು ಗಮನ ಹರಿಸಬೇಕು. ಉದ್ಯೋಗಿಗಳ ಹಿತಾಸಕ್ತಿ, ಧಾರ್ಮಿಕ ಸ್ವಾತಂತ್ರ್ಯದ ಕುರಿತು ಸಂಬಂಧಿತ ಉದ್ಯೋಗಿಗಳ ದೇಶದಲ್ಲಿರುವ ಕಾನೂನನ್ನು ಪರಿಗಣಿಸಬೇಕು ಎಂದು ಗುರುವಾರ ನೀಡಿದ ತೀರ್ಪಿನಲ್ಲಿ ಲಕ್ಸೆಂಬರ್ಗ್ ಮೂಲದ ನ್ಯಾಯಮಂಡಳಿ ಸ್ಪಷ್ಟಪಡಿಸಿದೆ.
ಗ್ರಾಹಕರ ಕಡೆಗಿನ ತಟಸ್ಥ ಚಿತ್ರಣ ಪ್ರಸ್ತುತಪಡಿಸಲು ಅಥವಾ ಸಾಮಾಜಿಕ ವಿವಾದ ತಡೆಯಲು, ಕೆಲಸದ ಸ್ಥಳದಲ್ಲಿ ಸಾಮಾಜಿಕ, ತಾತ್ವಿಕ ಅಥವಾ ಧಾರ್ಮಿಕ ನಂಬಿಕೆಗಳನ್ನು ಸಂಕೇತಿಸುವ ಗುರುತುಗಳನ್ನು ಧರಿಸುವುದನ್ನು ನಿಷೇಧಿಸಬೇಕು ಎಂದು ಉದ್ಯೋಗದಾತರು ಸಮರ್ಥಿಸಿದರೆ ಹೀಗೆ ಮಾಡಬಹುದು. ಆದರೆ ಹೀಗೆ ಮಾಡುವಾಗ ಉದ್ಯೋಗಿಗಳ ಪ್ರಾಮಾಣಿಕ ಅಗತ್ಯಗಳಿಗೆ ತೊಡಕಾಗಬಾರದು ಮತ್ತು ಸಂಬಂಧಿತ ಉದ್ಯೋಗಿಗಳ ದೇಶದಲ್ಲಿರುವ ಧಾರ್ಮಿಕ ಸ್ವಾತಂತ್ರ್ಯದ ಅಂಶಗಳನ್ನೂ ಪರಿಗಣಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಜರ್ಮನಿಯ ಇಬ್ಬರು ಮುಸ್ಲಿಂ ಮಹಿಳಾ ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಹಿಜಾಬ್(ತಲೆಗೆ ಧರಿಸುವ ವಸ್ತ್ರ) ಧರಿಸಲು ಆರಂಭಿಸಿದ್ದರಿಂದ ಅವರನ್ನು ಅಮಾನತುಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಕೆಲಸಕ್ಕೆ ಸೇರಿದ ಆರಂಭದಲ್ಲಿ ಹಿಜಾಬ್ ಧರಿಸದ ಇವರು, ಪೋಷಕರ ರಜೆ ಮುಗಿಸಿ ಕೆಲಸಕ್ಕೆ ಮರಳಿದ ಬಳಿಕ ಹಿಜಾಬ್ ಧರಿಸಲು ಆರಂಭಿಸಿದ್ದರು. ಕೆಲಸದ ಸ್ಥಳದಲ್ಲಿ ಹೀಗೆ ಮಾಡುವಂತಿಲ್ಲ ಎಂದು ಎಚ್ಚರಿಸಿದ್ದರೂ ಅವರು ನಿರಾಕರಿಸಿದ್ದರು ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿತ್ತು.







