ಸರ್ಫೇಸಿ ಕಾಯಿದೆಗೆ ತಿದ್ದುಪಡಿ ಮಾಡುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮನವಿ

ಬೆಂಗಳೂರು, ಜು.15: ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಕೇಂದ್ರ ಸರಕಾರದ ಕೃಷಿ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಗುರುವಾರ ದಿಲ್ಲಿಯ ನಿವಾಸದಲ್ಲಿ ಭೇಟಿಯಾಗಿ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ನೇತೃತ್ವದ ನಿಯೋಗ ಅಭಿನಂದನೆ ಸಲ್ಲಿಸಿತು.
ಸರ್ಫೇಸಿ ಕಾಯಿದೆಯ ವ್ಯಾಪ್ತಿಯಿಂದ ಕಾಫಿ, ಕಾಳು ಮೆಣಸು, ಏಲಕ್ಕಿ ಬೆಳೆಗಳನ್ನು ತೆಗೆಯಬೇಕು, ಈ ಕಾಯಿದೆಯಿಂದ ಸಾಲ ತೀರಿಸಲಾಗದ ಕಾಫಿ ಬೆಳೆಗಾರರ ಜಮೀನು ಹರಾಜು ಮಾಡುವ ಅವಕಾಶವಿದ್ದು, ಇದರಿಂದ ಕತ್ತು ಹಿಸುಕಿದಂತಾಗುತ್ತದೆ. ಕೇಂದ್ರ ಮಧ್ಯ ಪ್ರವೇಶಿಸಿ ಈ ಕಾಯಿದೆಯ ವ್ಯಾಪ್ತಿಯಿಂದ ಈ ಬೆಳೆಗಳನ್ನು ಹೊರತು ಪಡಿಸಿ ತಿದ್ದುಪಡಿ ತರಬೇಕು ಎಂದು ನಿಯೋಗ ಇದೇ ವೇಳೆ ಮನವಿ ಮಾಡಿತು.
ಒಂದು ಎಕರೆ, 10 ಗುಂಟೆ ಕಾಫಿ ಬೆಳೆಗಾರರನ್ನು ವಾಣಿಜ್ಯ ಬೆಳೆಗಾರರಂದು ಪರಿಗಣಿಸಬಾರದು, ಅವರನ್ನು ಅತೀ ಸಣ್ಣ ರೈತರೆಂದು ಪರಿಗಣಿಸಬೇಕು ಇದರಿಂದ ಅವರಿಗೆ ಸಾಲ, ಇತರೆ ಸಾಲ ಸೌಲಭ್ಯ ಪಡಯಲು ಅನುಕೂಲವಾಗುತ್ತದೆ ಎಂದು ನಿಯೋಗವು ಕೇಂದ್ರ ಸಚಿವೆಗೆ ಮನವಿ ಮಾಡಿತು.
ನಿಯೋಗದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಿವೇಗೌಡ್ರು, ಹಾಲಿ ಮೂಡಿಗೆರೆ ನಗರ ಸಭೆ ಸದಸ್ಯ ಧರ್ಮಪಾಲ್, ಮುಖಂಡರಾದ ಗಿರೀಶ್ ಹೆಮಕ್ಕಿ, ಸಂದರ್ಶ, ಪೂರ್ಣೇಶ್ ಮೈಲಿಮನೆ, ಅನಿಲ್, ಕಾರ್ತೀಕೆಯನ್ ಶಾಸ್ತ್ರೀ, ಸಂದೀಪ್ ಹಾಜರಿದ್ದರು.







