ದಿಲ್ಲಿ ಗಲಭೆ ಪ್ರಕರಣ: ಜುಲೈ 27ರಂದು ಉಮರ್ ಖಾಲಿದ್ ಜಾಮೀನು ಅರ್ಜಿ ವಿಚಾರಣೆ

ಹೊಸದಿಲ್ಲಿ, ಜು. 15: ಈಶಾನ್ಯ ದಿಲ್ಲಿಯ ಗಲಭೆಯ ಪಿತೂರಿ ಪ್ರಕರಣದಲ್ಲಿ ಕಠಿಣ ಕಾನೂನು ಬಾಹಿರ ಚಟುವಟಿಕೆ (ತಡೆ) ಕಾಯ್ದೆ ಅಡಿಯಲ್ಲಿ ಬಂಧಿತರಾಗಿರುವ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು)ದ ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯನ್ನು ಜುಲೈ 27ರಂದು ವಿಚಾರಣೆ ನಡೆಸಲಾಗುವುದು ಎಂದು ದಿಲ್ಲಿ ಉಚ್ಚ ನ್ಯಾಯಾಲಯ ಗುರುವಾರ ಹೇಳಿದೆ.
ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯ ಮುಂದಿನ ವಿಚಾರಣೆಯ ದಿನಾಂಕದ ಮರು ದಿನದ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಮಿತಾಬ್ ರಾವತ್ ಅವರು ಪ್ರಾಸಿಕ್ಯೂಷನ್ ಪರ ನ್ಯಾಯವಾದಿಗೆ ಸೂಚಿಸಿದರು. ಪ್ರಕರಣದಲ್ಲಿ ಹಿರಿಯ ನ್ಯಾಯವಾದಿ ತ್ರಿದೀಪ್ ಪಾಯಸ್ ಅವರು ಆರೋಪಿಯನ್ನು ಪ್ರತಿನಿಧಿಸಿದ್ದರು. ಈ ಪ್ರಕರಣದಲ್ಲಿ ಉಮರ್ ಖಾಲಿದ್ ಅವರೊಂದಿಗೆ ಇತರ ಹಲವರ ವಿರುದ್ಧ ಭಯೋತ್ಪಾದನೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 53 ಮಂದಿ ಸಾವನ್ನಪ್ಪಲು ಹಾಗೂ 700ಕ್ಕೂ ಅಧಿಕ ಜನರು ಗಾಯಗೊಳ್ಳಲು ಕಾರಣವಾದ 2020 ಫೆಬ್ರವರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಇವರು ಸಂಚುಗಾರರು ಎಂದು ಆರೋಪಿಸಲಾಗಿದೆ. ಉಮರ್ ಖಾಲಿದ್ ಅಲ್ಲದೆ, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತಹ್ನಾ, ಜೆಎನ್‌ಯು ವಿದ್ಯಾರ್ಥಿನಿಯರಾದ ನತಾಶಾ ಹಾಗೂ ದೇವಾಂಗನ ಕಲೀಟಾ, ಜಾಮಿಯಾ ಸಮನ್ವಯ ಸಮಿತಿಯ ಸಂಚಾಲಕ ಸಫೂರಾ ಝಗರ್, ಆಪ್‌ನ ಮಾಜಿ ಕೌನ್ಸಿಲರ್ ತಾಹಿರ್ ಹುಸೈನ್, ಹಾಗೂ ಇತರ ಹಲವರ ವಿರುದ್ಧ ಈ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.





