ಚಿಕ್ಕಮಗಳೂರು: ಕರೋನದಿಂದ ಮುಚ್ಚಿದ್ದರೂ ಹಸಿರಿನಿಂದ ನಳನಳಿಸುತ್ತಿದೆ ಸರಕಾರಿ ಶಾಲೆ
ಶಿಕ್ಷಕರ ಕೆಲಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

ಚಿಕ್ಕಮಗಳೂರು, ಜು.15: ಯಾವುದೇ ಸಂಸ್ಥೆಯ ಕಟ್ಟಡಗಳನ್ನು ಕೆಲ ತಿಂಗಳ ಕಾಲ ಮುಚ್ಚಿದರೆ ನಿರ್ವಹಣೆಯಿಲ್ಲದೇ ಅವು ಕಳಾಹೀನವಾಗುವುದು ಸಾಮನ್ಯ ಸಂಗತಿ, ಇದಕ್ಕೆ ಅಪವಾದವೆಂಬಂತೆ ಕೊರೋನಾದಿಂದಾಗಿ ಬರೋಬ್ಬರಿ ಒಂದು ವರ್ಷಗಳ ಕಾಲ ಮುಚ್ಚಿದ್ದರೂ ನಗರದ ಆಜಾದ್ ಪಾರ್ಕ್ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಇನ್ನೂ ಹಸಿರಿನಿಂದ ಕಂಗೊಳಿಸುತ್ತಾ ಸಾರ್ವಜನಿಕರ ಗಮನ ಸೆಳೆದಿದೆ.
ಕೊರೋನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಕಳೆದ ಒಂದು ವರ್ಷದಿಂದ ಎಲ್ಲಾ ಶಾಲೆಗಳಂತೆ ಆಜಾದ್ ಪಾರ್ಕ್ ಕನ್ನಡ ಶಾಲೆಯನ್ನೂ ಮುಚ್ಚಲಾಗಿತ್ತು, ಅದರಿಂದಾಗಿ ನಿರ್ವಹಣೆ ಕಾಣದೆ ಆ ಶಾಲೆಯೂ ಸೊರಗ ಬೇಕಿತ್ತು ಆದರೆ ಶಾಲೆಯ ದೈಹಿಕ ಶಿಕ್ಷಕ ಎಸ್.ಈ.ಲೋಕೇಶ್ವರಾಚಾರ್ ಅವರ ಕಾಳಜಿ ಮತ್ತು ಪರಿಶ್ರಮದಿಂದಾಗಿ ಶಾಲೆಯ ಕೈತೋಟ ಹಸಿರಿನಿಂದ ನಳನಳಿಸುತ್ತಿದೆ.
2010 ರಲ್ಲಿ ಅಲ್ಲಂಪುರ ಶಾಲೆಯಿಂದ ವರ್ಗಾವಣೆಗೊಂಡು ಆಜಾದ್ ಪಾರ್ಕ್ ಕನ್ನಡ ಶಾಲೆಗೆ ಬಂದ ದೈಹಿಕ ಶಿಕ್ಷಕ ಎಸ್.ಈ.ಲೋಕೇಶ್ವರಾಚಾರ್ ರೈತರ ಹೊಲ ಗದ್ದೆಗಳಿಗೆ ತೆರಳಿ ಅವರಿಂದ ಗಿಡಗಳನ್ನು ಕೇಳಿ ಪಡೆದು ತಂದು ಶಾಲೆಯ ಆವರಣದಲ್ಲಿ ನೆಟ್ಟು ಉಳಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನೆರವಿನಿಂದ ಸುಂದರ ಕೈತೋಟವನ್ನು ನಿರ್ಮಿಸಿದ್ದರು.
ಪ್ರತಿದಿನ ಬೆಳಿಗ್ಗೆ ಶಾಲೆ ಆರಂಭಕ್ಕೆ ಮುಂಚೆ ವಿದ್ಯಾರ್ಥಿಗಳೊಂದಿಗೆ ಸೇರಿ ಶಾಲೆ ಮತ್ತು ಆವರಣವನ್ನು ಸ್ವಚ್ಚಗೊಳಿಸುವುದರ ಜೊತೆಗೆ ಗಿಡಗಳಿಗೆ ನೀರು, ಗೊಬ್ಬರ ಹಾಕಿ ಪೋಷಿಸಿದ ಪರಿಣಾಮವಾಗಿ ಶಾಲೆಯ ಆವರಣದಲ್ಲಿ ಮೂರ್ನಾಲ್ಕು ಜಾತಿಯ ಆಳೆತ್ತರದ ಬಾಳೆ ಗಿಡಗಳು, ಪಪ್ಪಾಯಿ ಗಿಡಗಳು, ನುಗ್ಗೇಮರ, ಔಷಧಿಯ ಸಸ್ಯ ನೋನಿ ಗಿಡ, ಅಮೃತ ಬಳ್ಳಿ, ರಾಮಫಲ, ದಾಸವಾಳ, ಮಲ್ಲಿಗೆ ಸೇರಿದಂತೆ ಅನೇಕ ಗಿಡಗಳು ಬೆಳೆದು ನಿಂತು ಕೈಬೀಸಿ ಕರೆಯುತ್ತಿವೆ.
ಕೊರೋನದಿಂದಾಗಿ ಶಾಲೆಗೆ ರಜವಿದ್ದರೂ ಶಿಕ್ಷಕ ಲೋಕೇಶ್ವರಾಚಾರ್ ಹಾಯಾಗಿ ಮನೆಯಲ್ಲಿ ಕೂರದೇ ವಾರಕ್ಕೆ ಒಂದೆರಡು ದಿನ ಶಾಲೆಗೆ ತೆರಳಿ ತಾವೇ ಒಬ್ಬಂಟಿಯಾಗಿ ಗಿಡಗಳಿಗೆ ಗೊಬ್ಬರ ಮತ್ತು ನೀರೆರೆದು ಪೋಷಿಸಿದ ಪರಿಣಾಮ ಶಾಲೆ ಮುಚ್ಚಿ ಒಂದು ವರ್ಷವಾದರೂ ಕೈತೋಟ ಮಾತ್ರ ಹಚ್ಚ ಹಸಿರಾಗಿಯೇ ಉಳಿದಿದೆ.
ನನಗೆ ಅನ್ನ ನೀಡುವ ಮತ್ತು ಬದುಕು ಕಟ್ಟಿಕೊಟ್ಟ ಶಾಲೆ ನಮ್ಮ ಮನೆಯಂತೆಯೇ ಸ್ವಚ್ಚ ಮತ್ತು ಸುಂದರವಾಗಿ ಇರಬೇಕೆನ್ನುವ ಉದ್ದೇಶದಿಂದ ಹಾಗೂ ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ, ಶಿಸ್ತು ಮತ್ತು ಶ್ರದ್ದೆಯನ್ನು ಬೆಳೆಸುವ ಆಕಾಂಕ್ಷೆಯಿಂದ ಶಾಲೆ ಮತ್ತು ಕೈತೋಟವನ್ನು ಸುಂದರವಾಗಿಡಲು ತಾವು ಶ್ರಮ ಪಡುತ್ತಿರುವುದಾಗಿ ಶಿಕ್ಷಕ ಲೋಕೇಶ್ವರಾಚಾರ್ ಹೇಳುತ್ತಾರೆ.







