ಹಾಸನ: ಗ್ರಾ.ಪಂ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿ.ಪಂ ಕಚೇರಿ ಮುಂದೆ ಧರಣಿ

ಹಾಸನ,ಜು.15: ಗ್ರಾಮ ಪಂಚಾಯತ್ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಜಿಲ್ಲಾ ಪಂಚಾಯತ್ಗಳ ಮುಂದೆ ಸಿಐಟಿಯು ನೇತೃತ್ವದಲ್ಲಿ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಗ್ರಾಮ ಪಂಚಾಯಿತಿಯ ಬಿಲ್‍ಕಲೆಕ್ಟರ್, ಗುಮಾಸ್ತ ಹುದ್ದೆಯಿಂದ ಗ್ರೇಡ್-2 ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಆಯ್ಕೆ ಮೂಲಕ ನೇರ ನೇಮಕಾತಿಗೆ ತಡೆ ನೀಡಿದ್ದ ಆದೇಶವನ್ನು ಆರ್ಥಿಕ ಇಲಾಖೆಯು ಈ ಹುದ್ದೆಗಳನ್ನು ನೇಮಕ ಮಾಡಲು ಸಹಮತ ನೀಡಿದೆ. 2021 ಜುಲೈ 2 ರಂದು ಸರ್ಕಾರವು ನೇಮಕಾತಿ ಆದೇಶ ನೀಡಿ ಒಂದೇ ದಿನದಲ್ಲಿ ನೇಮಕಾತಿ ಆದೇಶವನ್ನು ಹಿಂಪಡೆದಿರುವುದರಿಂದ 20-25 ವರ್ಷಗಳಿಂದ ಸೇವೆ ಮಾಡಿ ನಿವೃತ್ತಿಯ ಅಂಚಿನಲ್ಲಿರುವ ಸಾವಿರಾರು ನೌಕರರಿಗೆ ತೀವ್ರವಾದ ಅನ್ಯಾಯವಾಗಿದೆ. ಕೂಡಲೇ ನೌಕರ ವಿರೋಧಿ ಸರ್ಕಾರದ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಗ್ರಾ.ಪಂ. ಸಿಬ್ಬಂದಿಗಳಿಗೆ 10-15 ತಿಂಗಳುಗಳಿಂದ ವೇತನವಿಲ್ಲದೆ ಸಂಕಷ್ಟದಲ್ಲಿದ್ದಾಗ 15ನೇ ಹಣಕಾಸಿನಲ್ಲಿ ಸಿಬ್ಬಂದಿಗಳಿಗೆ ವೇತನ ನೀಡುವಂತೆ ಸರ್ಕಾರ ಆದೇಶ ಮಾಡಿದ್ದಕ್ಕೆ ಹರ್ಷಗೊಂಡಿದ್ದೆವು. ಆದರೆ ತಳಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವೇತನ ಪಾವತಿಸದಿರುವ ಬಗ್ಗೆ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದರೂ ವೇತನ ಸಿಗುತ್ತಿಲ್ಲ. ಶಾಸನ ಬದ್ಧ ಅನುದಾನದಲ್ಲಿ ಸಿಬ್ಬಂದಿ ವೇತನ ಕಡಿತಮಾಡಿ ಸಿಬ್ಬಂದಿ ಖಾತೆಗೆ ಜಮಾ ಮಾಡುವಂತೆ 15ನೇ ಹಣಕಾಸಿನ ವೇತನ ಬಾಬ್ತು ಹಣವನ್ನು ಕಡಿತ ಮಾಡಿ ಸಿಬ್ಬಂದಿ ವೇತನ ಖಾತೆಗೆ ಜಮಾ ಮಾಡಬೇಕು ಎಂದರು.
ಗ್ರಾಮ ಪಂಚಾಯತಿಯ ಸಿಬ್ಬಂದಿಗಳು 25-30 ವರ್ಷಗಳಿಂದ ಸೇವೆ ಮಾಡಿದ್ದರೂ ಯಾವುದೇ ಸೇವಾ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವಾಗ ಗ್ರಾಮ ಪಂಚಾಯಿತಿಯ ಕೋರುತ್ತೇವೆ. ಎಲ್ಲಾ ಸಿಬ್ಬಂದಿಗಳನ್ನು ಒಳಪಡಿಸಬೇಕೆಂದು ಹಾಗೂ ಖಾಯಂ ಮಾಡಬೇಕೆಂದು ಗ್ರಾಮ ಪಂಚಾಯಿತಿಯಲ್ಲಿ 2017 ಅಕ್ಟೋಬರ್ 31ರವರೆಗೆ ಕೆಲಸ ಮಾಡುತ್ತಿದ್ದ ಎಲ್ಲಾ ಸಿಬ್ಬಂದಿಗಳನ್ನು ಇಎಫ್‍ಎಂಎಸ್‍ಗೆ ಒಳಪಡಿಸಬೇಕೆಂದು ಆದೇಶ ನೀಡಿದ್ದರೂ ಇನ್ನೂ ಸಾವಿರಾರು ಸಿಬ್ಬಂದಿಗಳು ಸೇರದೆ ಬಾಕಿ ಇರುವುದನ್ನು ಇಎಫ್‍ಎಂಎಸ್‍ಗೆ ಸೇರಿಸಬೇಕು. ನಿವೃತ್ತ ಹಾಗೂ ನಿಧನರಾದ ನೌಕರರಿಗೆ ಮತ್ತು ಕುಟುಂಬದವರಿಗೆ ಕೂಡಲೇ ನಿವೃತ್ತಿ ಉಪಧನ ಪಾವತಿಸಬೇಕು ಹಾಗೂ ಅನುಕಂಪ ಆಧಾರದ ನೇಮಕಾತಿಗಳಿಗೆ ಜಿಲ್ಲಾ ಪಂಚಾಯತ್ ಕೂಡಲೇ ಅನುಮತಿ ನೀಡಬೇಕು. ನಿವೃತ್ತ ಹಾಗೂ ನಿಧನರಾದ ನೌಕರರಿಗೆ ಮತ್ತು ಕುಟುಂಬದವರಿಗೆ ಕೂಡಲೇ ನಿವೃತ್ತಿ ಉಪಧನ ಪಾವತಿಸಬೇಕು ಹಾಗೂ ಅನುಕಂಪ ಆಧಾರದ ನೇಮಕಾತಿಗಳಿಗೆ ಜಿಲ್ಲಾ ಪಂಚಾಯತ್ ಕೂಡಲೇ ಅನುಮತಿ ನೀಡಲು ಆದೇಶ ನೀಡಿ, ಕೋವಿಡ್‍ನಿಂದ ನಿಧನರಾಗಿರುವ ನೌಕರರ ಕುಟುಂಬಗಳಿಗೆ ಸರ್ಕಾರದ ಆದೇಶದಂತೆ ಕೂಡಲೇ 30 ಲಕ್ಷ ವಿಮೆ ಪಾವತಿಸಬೇಕು. ಕೋವಿಡ್ ನಿವಾರಣೆಯ ಕೆಲಸಗಳಲ್ಲಿ ತೊಡಗಿರುವ ಗ್ರಾ.ಪಂ. ಕೋವಿಡ್ ಮುಂಚೂಣಿ ಕಾರ್ಮಿಕರಿಗೆ ಹೆಚ್ಚುವರಿಯಾಗಿ ತಿಂಗಳಿಗೆ ರೂ 10 ಸಾವಿರ ಪ್ರೋತ್ಸಾಹ ಧನ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಟಿ. ಹೊನ್ನೇಗೌಡ, ಜಿಲ್ಲಾ ಖಜಾಂಚಿ ಕುಮಾರಸ್ವಾಮಿ ಇತರರು ಪಾಲ್ಗೊಂಡಿದ್ದರು.







