ಕೋವಿಶೀಲ್ಡ್ ಡೋಸ್‌ಗಳ ಅಂತರ ತಗ್ಗಿಸಲು ದಿಲ್ಲಿ ಹೈಕೋರ್ಟ್ ನಿರಾಕರಣೆ

ಹೊಸದಿಲ್ಲಿ, ಜು. 15: ಕೋವಿಶೀಲ್ಡ್ ಲಸಿಕೆಯ ಡೋಸ್‌ನ ನಡುವಿನ 12-16 ವಾರಗಳ ಅಂತರವನ್ನು 50 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ಹಾಗೂ ಬಹುವಿಧದ ಆರೋಗ್ಯ ಸಮಸ್ಯೆ ಇರುವವರಿಗೆ 8 ವಾರಗಳಿಗೆ ಇಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ. ‘‘ನೋಟಿಸು ನೀಡಲು ನಮಗೆ ಒಲವು ಇಲ್ಲ. ನಾವು ಮನವಿಯನ್ನು ತಿರಸ್ಕರಿಸುತ್ತೇವೆ’’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಹಾಗೂ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರನ್ನು ಒಳಗೊಂಡ ಪೀಠ ಡಾ. ಸಿದ್ಧಾರ್ಥ ಡೆ ಅವರ ಮನವಿಯ ವಿಚಾರಣೆ ನಡೆಸಿ ಹೇಳಿತು.
‘‘ಕೋವಿಡ್ ಲಸಿಕೆಯ ಡೋಸ್ ನೀಡುವ ಯಾವುದಾದರೂ ಕಾರ್ಯ ವಿಧಾನದ ಬಗ್ಗೆ ನಿಮಗೆ ತಿಳಿದಿದೆಯೇ? ಎಷ್ಟು ಡೋಸ್‌ಗಳನ್ನು ನಿಗದಿ ಮಾಡಲಾಗಿದೆ ? ಯಾರು ಈ ಡೋಸ್‌ಗಳನ್ನು ನಿಗದಿ ಮಾಡುತ್ತಾರೆ?’’ ಎಂದು ಪೀಠ ಡಾ. ಸಿದ್ಧಾರ್ಥ ಡೇ ಪರ ವಕೀಲ ಕುಲದೀಪ್ ಜೌಹಾರಿ ಅವರನ್ನು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಜೌಹಾರಿ, ಈ ವಿಷಯದ ಬಗ್ಗೆ ಪರಿಶೀಲಿಸಲು ಕೋವಿಡ್ ಕಾರ್ಯಾಚರಣೆ ಗುಂಪು ಹಾಗೂ ಇತರ ತಜ್ಞರ ತಂಡ ಇದೆ ಎಂದರು. ಬ್ರಿಟನ್‌ನಲ್ಲಿ ವಿಜ್ಞಾನಿಗಳು ನಡೆಸಿದ ಅಧ್ಯಯನದ ಆಧಾರದಲ್ಲಿ ಹೇಳುವುದಾದರೆ, ಕೋವಿಡ್‌ನ ಹೊಸ ಪ್ರಬೇಧವನ್ನು ಗಮನದಲ್ಲಿರಿಸಿಕೊಂಡು ಲಸಿಕೆ ಡೋಸ್‌ನ ಅಂತರ ಕಡಿಮೆ ಮಾಡುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು. ‘‘ನಿಮಗೆ ನಮ್ಮನ್ನು ಮನವರಿಕೆ ಮಾಡಲು ಸಾಧ್ಯವಾಗಿಲ್ಲ. ನೀವು ವಾದಕ್ಕಾಗಿ ವಾದ ಮಾಡುತ್ತಿದ್ದೀರಿ’’ ಎಂದು ನ್ಯಾಯಾಲಯ ಹೇಳಿತು. ಅನಂತರ ಜೌಹಾರಿ ಅವರು ನಿಶ್ಯರ್ತವಾಗಿ ಮನವಿಯನ್ನು ಹಿಂಪಡೆದರು.







