ದೇಶದಲ್ಲಿ 1 ದಿನದಲ್ಲಿ ಕೊರೋನ ಸೋಂಕಿನ 41,806 ಹೊಸ ಪ್ರಕರಣಗಳು ದಾಖಲು
ಹೊಸದಿಲ್ಲಿ, ಜು. 15: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನ ಸೋಂಕಿನ 41,806 ಹೊಸ ಪ್ರಕರಣಗಳು ದಾಖಲಾಗಿವೆ. ಅಲ್ಲದೆ, 581 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಪರಿಷ್ಕೃತ ದತ್ತಾಂಶ ತಿಳಿಸಿದೆ.
ಇದರೊಂದಿಗೆ ದೇಶದಲ್ಲಿ ಕೊರೋನ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಗುರುವಾರ ಬೆಳಗ್ಗೆ 8 ಗಂಟೆ ವರೆಗೆ 4,32,041ಕ್ಕೆ ತಲುಪಿದೆ. ಒಟ್ಟು ಸಾವಿನ ಪ್ರಕರಣಗಳ ಸಂಖ್ಯೆ 4,11,989ಕ್ಕೆ ತಲುಪಿದೆ ಎಂದು ಸಚಿವಾಲಯ ತಿಳಿಸಿದೆ. ಕೊರೋನ ಸೋಂಕಿನಿಂದ ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ ಅತ್ಯಧಿಕ 170 ಮಂದಿ ಸಾವನ್ನಪ್ಪಿದ್ದಾರೆ. ಅನಂತರ ಕೇರಳದಲ್ಲಿ ಅತ್ಯಧಿಕ 128 ಮಂದಿ ಸಾವನ್ನಪ್ಪಿದ್ದಾರೆ.
ಐದು ರಾಜ್ಯಗಳಲ್ಲಿ ಅತ್ಯಧಿಕ ಸಾವಿನ ಪ್ರಕರಣಗಳು ದಾಖಲಾಗಿವೆ. ಕೇರಳದಲ್ಲಿ 15,637, ಮಹಾರಾಷ್ಟ್ರ 8,602, ಆಂಧ್ರಪ್ರದೇಶ 2,591, ತಮಿಳನಾಡು 2,458, ಒಡಿಶಾದಲ್ಲಿ 2,074 ಪ್ರಕರಣಗಳು ದಾಖಲಾಗಿವೆ. ಸುಮಾರು ಶೇ. 75.02 ಹೊಸ ಪ್ರಕರಣಗಳು ಐದು ರಾಜ್ಯಗಳಿಂದ ವರದಿಯಾಗಿವೆ. ಕೇರಳ ರಾಜ್ಯವೊಂದರಲ್ಲೇ ಶೇ. 37.4 ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಲಸಿಕೆಯ ಒಟ್ಟು 34,97,058 ಡೋಸ್‌ಗಳನ್ನು ನೀಡಲಾಗಿದೆ. ಇದರೊಂದಿಗೆ ನೀಡಲಾದ ಲಸಿಕೆಯ ಒಟ್ಟು ಡೋಸ್‌ಗಳ ಸಂಖ್ಯೆ 39,13,40,491ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಗುಣಮುಖರಾಗುತ್ತಿರುವವರ ಪ್ರಮಾಣ ಶೇ. 97.28 ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 39,130 ಸೋಂಕಿತರು ಗುಣಮುಖರಾಗಿದ್ದಾರೆ. ಇದರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ 3,01,43,850ಕ್ಕೆ ಏರಿಕೆಯಾಗಿದೆ.







