ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಮರು ನೇಮಕಕ್ಕೆ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಮನವಿ
ಬೆಂಗಳೂರು, ಜು. 15: `ಎರಡು ವರ್ಷ ಏಳು ತಿಂಗಳಿಂದ ಅಮಾನತ್ತಿನಲ್ಲಿರುವ ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಎಸ್ ಮೂರ್ತಿ ಅವರನ್ನು ಕೂಡಲೇ ಸೇವೆಗೆ ಮರು ನೇಮಕ ಮಾಡಬೇಕು' ಎಂದು ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಇಂದಿಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಗೃಹ, ಕಾನೂನು ಸಂಸದೀಯ ವ್ಯವಹಾರ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದೆ.
ಗುರುವಾರ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್ ಅವರು, ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿದ್ದು, `2016-17ರಲ್ಲಿ ಜರುಗಿದ ಬೆಳಗಾವಿ ವಿಧಾನ ಮಂಡಲ ಅಧಿವೇಶನದ ಏರ್ಪಾಡುಗಳ ವೆಚ್ಚಗಳ ಕಡತಗಳಿಗೆ ಅಂದಿನ ಸ್ಪೀಕರ್ ಕೆ.ಬಿ.ಕೋಳಿವಾಡ ಅವರನ್ನು ಕತ್ತಿನಲ್ಲಿಟ್ಟು ಸಹಿ ಪಡೆದು ಗಂಭೀರ ಕರ್ತವ್ಯ ಲೋಪ ಎಸಗಿರುತ್ತಾರೆಂದು ಆರೋಪಿಸಲಾಗಿತ್ತು. 2018ರಲ್ಲಿ ಅಂದಿನ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರು, ಕಾರ್ಯದರ್ಶಿ ಎಸ್.ಮೂರ್ತಿ ಅವರನ್ನು ಅಮಾನತ್ತಿನಲ್ಲಿಟ್ಟಿದ್ದರು.
ಯಾವುದೇ ಸರಕಾರಿ ನೌಕರ ಅಮಾನತ್ತಿನಲ್ಲಿಟ್ಟ ತರುವಾಯ ದೋಷಾರೋಪಗಳ ಪಟ್ಟಿ ಹೊರಡಿಸಿ ಕೂಡಲೇ ಅಥವಾ ಆರು ತಿಂಗಳ ಒಳಗೆ ಸೇವೆಗೆ ಮರು ನೇಮಕ ಮಾಡಬೇಕು ಎಂದು ಸರಕಾರದ ಸೇವಾ ನಿಯಾಮವಳಿಗಳು ಹೇಳುತ್ತವೆ. ಈ ಮಧ್ಯೆ ಹೈಕೋರ್ಟ್ ಕೂಡ ಎಸ್.ಮೂರ್ತಿ ಅವರನ್ನು ಮರು ನೇಮಕ ಮಾಡಬೇಕೆಂದು ತೀರ್ಪು ನೀಡಿದೆ. ಮೇಲ್ಮನವಿಯ ತರುವಾಯ ಮೂರ್ತಿ ಅವರ ಮರು ನೇಮಕ ರದ್ದು ಮಾಡಿಲ್ಲ. ಹೀಗಾಗಿ ಮೂರ್ತಿ ಅವರು ನ್ಯಾಯಾಂಗ ನಿಂಧನೆ ಕೇಸು ದಾಖಲಿಸಿದ್ದು, ಕೋರ್ಟ್ ವಿಶೇಷ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ. ಹೀಗಾಗಿ ಕೂಡಲೇ ಎಸ್.ಮೂರ್ತಿ ಅವರನ್ನು ಮರು ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ.







