ದಿಲ್ಲಿ ಗಲಭೆ ಪ್ರಕರಣದ ವರದಿ ಪ್ರಶ್ನಿಸಿ ಮನವಿ: ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರಕ್ಕೆ ಕಾಲಾವಕಾಶ ನೀಡಿದ ಹೈಕೋರ್ಟ್
ಹೊಸದಿಲ್ಲಿ, ಜು. 15: ಈಶಾನ್ಯ ದಿಲ್ಲಿಯಲ್ಲಿ 2020 ಫೆಬ್ರವರಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ದಿಲ್ಲಿ ಅಲ್ಪ ಸಂಖ್ಯಾತರ ಆಯೋಗ ರೂಪಿಸಿದ ಸತ್ಯ ಶೋಧನಾ ಸಮಿತಿಯ ವರದಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿ ಕುರಿತಂತೆ ಪ್ರತಿಕ್ರಿಯೆ ಸಲ್ಲಿಸಲು ದಿಲ್ಲಿ ಉಚ್ಚ ನ್ಯಾಯಾಲಯ ಕೇಂದ್ರ ಸರಕಾರ ಹಾಗೂ ಇತರರಿಗೆ ಇನ್ನಷ್ಟು ಕಾಲಾವಕಾಶ ನೀಡಿದೆ.
ಪ್ರಕರಣದ ಕುರಿತು ಪ್ರತಿಕ್ರಿಯೆ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ನೀಡಬೇಕು ಎಂದು ಕೇಂದ್ರ ಸರಕಾರದ ಪರವಾಗಿ ಹಾಜರಾಗಿದ್ದ ನ್ಯಾಯವಾದಿ ಮೋನಿಕಾ ಅರೋರಾ ಕೋರಿದ ಬಳಿಕ ನ್ಯಾಯಮೂರ್ತಿಗಳಾದ ಡಿ.ಎನ್. ಪಟೇಲ್ ಹಾಗೂ ಜ್ಯೋತಿ ಸಿಂಗ್ ಅವರನ್ನೊಳಗೊಂಡ ಪೀಠ ಕೇಂದ್ರ ಸರಕಾರಕ್ಕೆ ಇನ್ನಷ್ಟು ಕಾಲಾವಕಾಶ ನೀಡಿತು. ಈ ಹಿಂದೆ ಈ ಮನವಿಗೆ ಸಂಬಂಧಿಸಿ ಇದೇ ಪೀಠ ನೋಟಿಸು ಜಾರಿ ಮಾಡಿತ್ತು ಹಾಗೂ ದಿಲ್ಲಿ ಪೊಲೀಸ್ ಹಾಗೂ ವರದಿಯನ್ನು ಪ್ರಕಟಿಸಿದ ಪ್ರಕಾಶಕರ ಪ್ರತಿಕ್ರಿಯೆ ಕೋರಿತ್ತು. ಸತ್ಯ ಶೋಧನಾ ಸಮಿತಿ ಪ್ರಕಟಿಸಿದ 2020 ಜೂನ್ 27ರ ವರದಿಯನ್ನು ತಳ್ಳಿ ಹಾಕುವಂತೆ ಹಾಗೂ ರದ್ದುಗೊಳಿಸುವಂತೆ ಮನವಿ ಕೋರಿತ್ತು.
ಇದಲ್ಲದೆ, ಹ್ಯೂಮನ್ ರೈಟ್ಸ್ ವಾಚ್, ಸಿಟಿಜನ್ ಆ್ಯಂಡ್ ಲಾಯರ್ಸ್ ಇನಿಷಿಯೇಟಿವ್ ಹಾಗೂ ಅಮ್ನೇಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ಪ್ರಕಟಿಸಿದ ವರದಿ ಸೇರಿದಂತೆ ಹಲವು ಖಾಸಗಿ ವರದಿಯನ್ನು ಮನವಿ ಪ್ರಶ್ನಿಸಿತ್ತು. ಹಿಂಸಾಚಾರದ ಸಂತ್ರಸ್ತರಾಗಿರುವ ದೂರುದಾರ ಧರ್ಮೇಶ್ ಶರ್ಮಾ ಈ ವರದಿಯ ಅಂಶ ಹಾಗೂ ರೂಪ ನ್ಯಾಯಾಂಗ ವೇದಿಕೆ ಹಾಗೂ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚಲು ರೂಪಿಸಲಾಗಿದೆ ಎಂದು ಮನವಿಯಲ್ಲಿ ಪ್ರತಿಪಾದಿಸಿದ್ದಾರೆ.





