ಶಿವಮೊಗ್ಗ: ವಿಮಾನ ನಿಲ್ದಾಣಕ್ಕೆ ಶಿವಪ್ಪ ನಾಯಕರ ಹೆಸರಿಡಲು ಒತ್ತಾಯ
ಶಿವಮೊಗ್ಗ,ಜು.15: ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಕೆಳದಿ ಶಿವಪ್ಪ ನಾಯಕ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಟ್ರಸ್ಟಿನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್,ಕೆಳದಿ ಸಾಮ್ರಾಜ್ಯವನ್ನು ಆಳಿದ ಶಿಸ್ತಿನ ಸಿಪಾಯಿ ಶಿವಪ್ಪನಾಯಕ ಅವರು ಶಿವಮೊಗ್ಗ ಮತ್ತು ಕರ್ನಾಟಕದ ಆದರ್ಶ ಪ್ರಾಯ ರಾಜನಾಗಿದ್ದು, ವಿಮಾನ ನಿಲ್ದಾಣಕ್ಕೆ ಅವರು ಹೆಸರಿಡಲು ಸೂಕ್ತ ಎಂದು ತಿಳಿಸಿದರು.
ಈಗಾಗಲೇ ಕೆಲವು ಸಂಘಟನೆಗಳು ಕೆಲವು ಹೆಸರುಗಳನ್ನು ವಿಮಾನ ನಿಲ್ದಾಣಕ್ಕೆ ಸೂಚಿಸುತ್ತಿವೆ. ಆದರೆ ಯಾವುದೇ ಒಂದು ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಿಗೆ ಧೀಮಂತ ನಾಯಕರ ಹೆಸರನ್ನು ನಾಮಕರಣ ಮಾಡಬೇಕಾದರೆ ಆ ಹೆಸರು ಈ ನಿಲ್ದಾಣಗಳಿಗೆ ಚಾರಿತ್ರಿಕವಾಗಿ ಅರ್ಥಪೂರ್ಣವಾಗಿರಬೇಕು ಎಂದರು.
ಶಿವಪ್ಪ ನಾಯಕರ ಆಳ್ವಿಕೆಯ ಅವಧಿಯಲ್ಲಿ ಮಂಗಳೂರು, ಕುಂದಪೂರ ಮತ್ತು ಹೊನ್ನಾವರ ಕೋಸ್ಟ್ಲ್ ಪೋಚುಗೀಸ್ ಆಳ್ವಿಕೆಯ ಕೋಟೆಗಳನ್ನು ಶಿವಪ್ಪನಾಯಕ ತನ್ನ ಆಳ್ವಿಕೆಗೆ ೧೬೫೩ರಲ್ಲಿ ವಶಪಡಿಸಿಕೊಂಡರು. ಚಂದ್ರಗಿರಿ, ಬೇಕಲ್ ಮತ್ತು ಮಂಗಳೂರು ಕೋಟೆಗಳನ್ನು ಶಿವಪ್ಪನಾಯಕ ಅವರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಕೆಳದಿ ಸಾಮ್ರಾಜ್ಯ ವಂಶಸ್ಥರಲ್ಲಿ ಶಿಸ್ತಿನ ಸಿಪಾಯಿ ಎನಿಸಿಕೊಂಡಿದ್ದ ಶಿವಪ್ಪನಾಯಕರು ಪ್ರಮುಖರು ಎಂದರು.
ಕೃಷಿ ಭೂಮಿಗೆ ಅದರ ಬೆಳೆಯ ಆಧಾರದ ಮೇಲೆ ಕಂದಾಯ ಹಾಕುವ ವ್ಯವಸ್ಥೆಯನ್ನು ಶಿವಪ್ಪ ನಾಯಕರ ಕಾಲದಲ್ಲಿ ಜಾರಿಗೆ ತರಲಾಯಿತು ಮತ್ತು ಅವರ ಆಳಿಕ್ವೆಯ ವ್ಯಾಪ್ತಿಯಲ್ಲಿ ಕೆರೆಕಟ್ಟೆಗಳನ್ನು ನಿರ್ಮಿಸಲಾಯಿತು ಹಾಗೂ ಭೂಮಿಗಳಲ್ಲಿ ಗಡಿ ಹದ್ದುಬಸ್ತನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಎಲ್ಲಾ ಜನಾಂಗದವರು ಶಾಂತಿಯಿಂದ ಜೀವನ ನಡೆಸಲು ಪ್ರೋತ್ಸಾಹಿಸಲಾಗುತ್ತಿತ್ತು ಎಂದರು.
ಶಿವಮೊಗ್ಗದಲ್ಲಿ ಶಿವಪ್ಪನಾಯಕ ಅರಮನೆ ಶಿವಪ್ಪ ನಾಯಕರ ಕಾಲದಲ್ಲಿ ನಿರ್ಮಿಸಲಾಗಿರುವುದು ಹೆಮ್ಮೆಯ ವಿಷಯ ಈ ಎಲ್ಲಾ ಹಿನ್ನಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಶಿವಪ್ಪ ನಾಯಕ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿಗಳಾದ ಹೊಳೆಮಡಿಲು ವೆಂಕಟೇಶ್, ಎಸ್.ವಿ.ರಾಜಮ್ಮ, ಹೆಚ್.ಎಂ.ಸಂಗಯ್ಯ, ಎಲ್.ಆರ್.ಗೋಪಾಲಕೃಷ್ಣ ಉಪಸ್ಥಿತರಿದ್ದರು.







