ಬಿಡುಗಡೆಯಾಗದ ವೇತನ: ಮಡಿಕೇರಿಯಲ್ಲಿ ಗ್ರಾ.ಪಂ ನೌಕರರಿಂದ ಧರಣಿ

ಮಡಿಕೇರಿ ಜು.15 : ಕೊಡಗು ಜಿಲ್ಲೆಯ ವಿವಿಧ ಗ್ರಾ.ಪಂ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 700ಕ್ಕೂ ಹೆಚ್ಚಿನ ನೌಕರರಿಗೆ ನೀಡಲು ಬಾಕಿ ಇರುವ ವೇತನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಗ್ರಾ.ಪಂ ನೌಕರರ ಸಂಘದ ಕೊಡಗು ಜಿಲ್ಲಾ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿ.ಪಂ. ಕಚೇರಿ ಎದುರು ಭಿತ್ತಿಪತ್ರಗಳನ್ನು ಹಿಡಿದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್, ಕಳೆದ 6 ತಿಂಗಳಿನಿಂದ ವೇತನ ಪಾವತಿಯಾಗದೆ ಸಂಕಷ್ಟದ ಬದುಕು ಸಾಗಿಸುತ್ತಿರುವ ಗ್ರಾ.ಪಂ ನೌಕರರಿಗೆ 15ನೇ ಹಣಕಾಸು ಯೋಜನೆಯಡಿ ವೇತನ ಪಾವತಿಸಬೇಕು, ಸ್ವಚ್ಛತಾ ಕೆಲಸಗಾರರು ಹಾಗೂ ಇತರ ಸಿಬ್ಬಂದಿಗಳ ನೌಕರಿಗೆ ಅನುಮೋದನೆ ನೀಡಬೇಕು, ಕೋವಿಡ್‍ನಿಂದ ಮೃತಪಟ್ಟ ನೌಕರರ ಕುಟುಂಬಕ್ಕೆ ರೂ.30 ಲಕ್ಷ ಪರಿಹಾರ ಘೋಷಿಸಬೇಕು, ಅನುಕಂಪದ ನೇಮಕಾತಿ ಮಾಡಬೇಕು. ಇಎಫ್‍ಎಂಎಸ್ ನಲ್ಲಿ ಎಲ್ಲಾ ಸಿಬ್ಬಂದಿಗಳ ಮಾಹಿತಿ ನಮೂದಿಸಬೇಕು ಎಂದು ಒತ್ತಾಯಿಸಿದರು.
ಬಿಲ್‍ಕಲೆಕ್ಟರ್/ಗುಮಾಸ್ಥರಿಂದ ಕಾರ್ಯದರ್ಶಿ ಗ್ರೇಡ್ 2 ಮತ್ತು ಲೆಕ್ಕ ಸಹಾಯಕ ಹುದ್ದೆಗೆ ನೀಡಲಾಗಿದ್ದ ಬಡ್ತಿ ಆದೇಶವನ್ನು ಆರ್ಥಿಕ ಒಪ್ಪಿಗೆ ಇದ್ದರೂ ದುರುದ್ದೇಶದಿಂದ ಹಿಂಪಡೆಯಲಾಗಿದೆ ಎಂದು ಆರೋಪಿಸಿದ ಅವರು, ತಕ್ಷಣ ಬಡ್ತಿ ನೀಡಬೇಕೆಂದು ಆಗ್ರಹಿಸಿ ಬೇಡಿಕೆಗಳ ಮನವಿ ಪತ್ರವನ್ನು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನೀಡಿದರು.
ಸಮಿತಿಯ ಕಾರ್ಯದರ್ಶಿ ಪಿ.ಉಮೇಶ್, ಖಜಾಂಚಿ ಜಾನಕಿ, ಕುಶಾಲನಗರ ತಾಲ್ಲೂಕು ಅಧ್ಯಕ್ಷ ಅಣ್ಣಪ್ಪ, ವಿರಾಜಪೇಟೆ ತಾಲ್ಲೂಕು ಉಪಾಧ್ಯಕ್ಷ ಮಹದೇವ, ಪ್ರಮುಖರಾದ ಹೆಚ್.ಆರ್. ಅನೀಲ್, ಖಾಲೀದ್, ಮೂರ್ತಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.







