ಚಿಕ್ಕಮಗಳೂರು: ಜಿಲ್ಲಾದ್ಯಂತ ನಿರಂತರ ಮಳೆಗೆ ಹಲವು ಮನೆಗಳಿಗೆ ಹಾನಿ
ಚಿಕ್ಕಮಗಳೂರು-ಮತ್ತೋಡಿ ಸಂಪರ್ಕ ಕಡಿತ

ಚಿಕ್ಕಮಗಳೂರು, ಜು.15: ಕಾಫಿನಾಡಿನಲ್ಲಿ ಗುರುವಾರ ಸುರಿದ ಧಾರಾಕಾರ ಮಳೆಯ ಅಬ್ಬರಕ್ಕೆ ರಸ್ತೆ, ಮನೆ, ಧರೆ ಕುಸಿತದಂತಹ ಘಟನೆಗಳ ಜಿಲ್ಲೆಯಲ್ಲಿ ವರದಿಯಾಗಿದ್ದು, ಭಾರೀ ಮಳೆಗೆ ಜಿಲ್ಲಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರಮುಖ ನದಿಗಳು ತುಂಬಿ ಹರಿಯುತ್ತಿದ್ದು, ಜಿಲ್ಲಾಡಳಿತ ಪ್ರಾಕೃತಿಕ ಅವಘಡಗಳನ್ನು ನಿಯಂತ್ರಿಸಲು ತಾಲೂಕು ಆಡಳಿತಗಳಿಗೆ ಸೂಚನೆ ನೀಡಿದೆ.
ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಒಂದು ವಾರದಿಂದ ಧಾರಾಕಾರ ಮಳೆಯಾಗುತ್ತಿದ್ದು, ಭಾರೀ ಮಳೆಯಿಂದಾಗಿ ಮೂಡಿಗೆರೆ, ಶೃಂಗೇರಿ, ಕೊಪ್ಪ, ಕಳಸ, ಎನ್.ಆರ್.ಪುರ ತಾಲೂಕುಗಳು ಹಾಗೂ ಚಿಕ್ಕಮಗಳೂರು ತಾಲೂಕಿನ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು, ವಸ್ತಾರೆ, ಮುಳ್ಳಯ್ಯನಗಿರಿ, ಮುತ್ತೋಡಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ.
ಗುರುವಾರ ಮುಂಜಾನೆ ಚಿಕ್ಕಮಗಳೂರು ತಾಲೂಕಿನ ಹೊನ್ನಾಳ ಚೆಕ್‍ಪೋಸ್ಟ್ ಬಳಿ ರಾತ್ರಿ ಇಡೀ ಸುರಿದ ಭಾರೀ ಮಳೆಯಿಂದಾಗಿ ಚಿಕ್ಕಮಗಳೂರು-ಮತ್ತೋಡಿ ಅಭಯಾರಣ್ಯ ಸಂಪರ್ಕದ ರಸ್ತೆ ಸಂಪೂರ್ಣವಾಗಿ ಕುಸಿದು ವಾಹನ ಹಾಗೂ ಜನಸಂಚಾರ ಸ್ತಬ್ಧಗೊಂಡಿದೆ. ರಸ್ತೆ ಕುಸಿದಿರುವುದರಿಂದ ಚಿಕ್ಕಮಗಳೂರು-ಮುತ್ತೋಡಿ ಸಂಪರ್ಕ ಕಡಿತಗೊಂಡಿದೆ. ಮೂಡಿಗೆರೆ ತಾಲೂಕಿನ ಬೊಮ್ಮನ ಗದ್ದೆ ಗ್ರಾಮದಲ್ಲಿ ಭಾರೀ ಮಳೆ ಗಾಳಿಗೆ ಮನೆ ಸಮೀಪದ ಮರವೊಂದು ಮನೆಯ ಮೇಲೆ ಉರುಳಿ ಬಿದ್ದ ಪರಿಣಾಮ ಫೆಲಿಕ್ಸ್ ಎಂಬವರ ಮನೆಗೆ ಭಾಗಶಃ ಹಾನಿಯಾಗಿದೆ. ಧರ್ಮಸ್ಥಳ ವಿಪತ್ತು ನಿರ್ವಹಣ ತಂಡದವರು ಮನೆ ಮೇಲಿದ್ದ ಮರ ತೆರವುಗೊಳಿಸಿದ್ದಾರೆ. ಕಂದಾಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಉಳಿದಂತೆ ಕಳಸ ತಾಲೂಕಿನಾದ್ಯಂತ ನಿರಂತರ ಮಳೆಯಿಂದಾಗಿ ಭದ್ರಾ ನದಿ ತುಂಬಿ ಹರಿಯುತ್ತಿದ್ದು, ಕಳಸ-ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ ಮುಳುಗುವ ಆತಂಕ ಎದುರಾಗಿದೆ. ತಾಲೂಕಿನ ವಿವಿಧೆಡೆ ಧಾರಾಕಾರ ಮಳೆಯಿಂದ ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮೂಡಿಗೆರೆ ತಾಲೂಕಿನ ಕಿರುಗುಂದ, ಕೊಟ್ಟಿಗೆಹಾರ, ಬಾಳೂರು, ಜಾವಳಿ, ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಕುಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಇನ್ನು ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ನಿರಂತರ ಮಳೆಯಿಂದಾಗಿ ಅಲ್ಲಲ್ಲಿ ರಸ್ತೆ ಬದಿಯ ಧರೆ ಕುಸಿತಗೊಂಡು ವಾಹನ, ಜನ ಸಂಚಾರಕ್ಕೆ ಕೆಲಹೊತ್ತು ಅಡಚಣೆಯಾಗಿತ್ತು. ಚಿಕ್ಕಮಗಳೂರು ನಗರ ಸೇರಿದಂತೆ ಕಡೂರು, ತರೀಕೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ಗುರುವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಉತ್ತಮ ಮಳೆಯಾಗಿದ್ದು, ಉಳಿದಂತೆ ಮೋಡಕವಿದ ವಾತಾರಣ ನಿರ್ಮಾಣವಾಗಿತ್ತು.
ಜಿಲ್ಲಾದ್ಯಂತ ಭಾರೀ ಮಳೆಯಾಗುತ್ತಿರುವುದರಿಂದ ಜಿಲ್ಲಾಡಳಿತ ಜಿಲ್ಲಾದ್ಯಂತ ಆರೆಂಜ್ ಅಲರ್ಟ್ ಘೋಷಿಸಿದ್ದು, ನದಿ ಪಾತ್ರಗಳಿಗೆ ಜನರು ತೆರಳದಂತೆ ಸೂಚನೆ ನೀಡಿದೆ. ಅಲ್ಲದೇ ಪ್ರಾಕೃತಿಕ ಅವಘಡಗಳ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲು ವಿಪತ್ತು ನಿರ್ವಹಣಾ ಘಟಕ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಆದೇಶ ನೀಡಿದೆ.





