ದೀರ್ಘಕಾಲೀನ ಕೋವಿಡ್ 200ಕ್ಕೂ ಅಧಿಕ ಲಕ್ಷಣಗಳನ್ನು ಹೊಂದಿದೆ: ಲ್ಯಾನ್ಸೆಟ್ ಅಧ್ಯಯನ

ಹೊಸದಿಲ್ಲಿ: ದೀರ್ಘಕಾಲೀನ ಕೋವಿಡ್-19 ಅನುಭವಿಸುವ ರೋಗಿಗಳು 200ಕ್ಕೂ ಅಧಿಕ ಲಕ್ಷಣಗಳನ್ನು ಪ್ರಕಟಿಸುತ್ತಾರೆ ಎಂದು ಲ್ಯಾನ್ಸೆಟ್ ಜರ್ನಲ್‌ನಲ್ಲಿ ಗುರುವಾರ ಪ್ರಕಟಗೊಂಡಿರುವ ಅಧ್ಯಯನ ವರದಿಯು ತಿಳಿಸಿದೆ.
ಯುನಿವರ್ಸಿಟಿ ಕಾಲೇಜ್ ಲಂಡನ್(ಯುಸಿಎಲ್)ನ ವಿಜ್ಞಾನಿಗಳ ನೇತೃತ್ವದಲ್ಲಿ ನಡೆದ ಅಧ್ಯಯನವು 56 ದೇಶಗಳ 3,762 ಕೋವಿಡ್ ರೋಗಿಗಳನ್ನು ಸಮೀಕ್ಷೆಗೊಳಪಡಿಸಿತ್ತು.
ದೀರ್ಘಕಾಲೀನ ಕೋವಿಡ್‌ನ ಅತ್ಯಂತ ಸಾಮಾನ್ಯ ಲಕ್ಷಣಗಳು ಆಯಾಸ, ಪರಿಶ್ರಮದ ನಂತರದ ಅಸ್ವಸ್ತತೆಯಿಂದ ಹಿಡಿದು ಭ್ರಾಂತಿಗಳು, ನಡುಕ ಮತ್ತು ಕಿವಿಮೊರೆತದವರೆಗೆ ವ್ಯಾಪಿಸಿರುತ್ತವೆ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ. ಚರ್ಮದಲ್ಲಿ ತುರಿಕೆ, ಋತುಚಕ್ರದಲ್ಲಿ ಬದಲಾವಣೆಗಳು, ಲೈಂಗಿಕ ನಿಶ್ಶಕ್ತಿ, ಹೃದಯ ಬಡಿತದಲ್ಲಿ ಏರಿಳಿತ, ಜ್ಞಾಪಕ ಶಕ್ತಿ ನಷ್ಟ, ಮಸುಕಾದ ದೃಷ್ಟಿ ಮತ್ತು ಅತಿಸಾರ ಇವು ಅಧ್ಯಯನದಲ್ಲಿ ಕಂಡು ಬಂದಿರುವ ಇತರ ಲಕ್ಷಣಗಳಾಗಿವೆ.
ಸಂಶೋಧಕರು ವೆಬ್ ಆಧಾರಿತ ಸಮೀಕ್ಷೆಯನ್ನು ನಡೆಸಿದ್ದು, ಈ ಪ್ರಕ್ರಿಯೆಯನ್ನು ದೀರ್ಘಕಾಲೀನ ಕೋವಿಡ್ ಅನ್ನು ಹೊಂದಿದ್ದಾರೆ ಎಂದು ದೃಢಪಟ್ಟ ಅಥವಾ ಶಂಕಿತ ರೋಗಿಗಳಲ್ಲಿ ಲಕ್ಷಣಗಳನ್ನು ನಿರೂಪಿಸಲು ಸಾಧ್ಯವಾಗುವಂತೆ ರೂಪಿಸಲಾಗಿತ್ತು.
ಶರೀರದ 10 ಅಂಗ ವ್ಯವಸ್ಥೆಗಳಲ್ಲಿ ಈ ಲಕ್ಷಣಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಮೂರನೇ ಒಂದರಷ್ಟು ಲಕ್ಷಣಗಳು ಕನಿಷ್ಠ ಆರು ತಿಂಗಳುಗಳ ಕಾಲ ರೋಗಿಗಳನ್ನು ಕಾಡಿದ್ದವು. ಸಮೀಕ್ಷಗೊಳಪಟ್ಟವರಲ್ಲಿ ಒಟ್ಟು 2,454 ರೋಗಿಗಳಲ್ಲಿ ಲಕ್ಷಣಗಳು ಆರು ತಿಂಗಳಿಗೂ ಹೆಚ್ಚು ಮುಂದುವರಿದಿದ್ದವು ಮತ್ತು ಸರಾಸರಿ 9.1 ಅಂಗ ವ್ಯವಸ್ಥೆಗಳಲ್ಲಿ ಸರಾಸರಿ 55.9 ಲಕ್ಷಣಗಳನ್ನು ಅನುಭವಿಸಿದ್ದರು ಎಂದು ಅಧ್ಯಯನ ವರದಿಯು ತಿಳಿಸಿದೆ.
ತಮ್ಮ ಲಕ್ಷಣಗಳು ಕೋವಿಡ್-19ಗೆ ಸಂಬಂಧಿಸಿದ್ದೇ ಎನ್ನುವುದು ಖಚಿತವಿಲ್ಲದೆ ಮೌನವಾಗಿ ನರಳುತ್ತಿರುವ ಸಾವಿರಾರು ದೀರ್ಘಕಾಲೀನ ಕೋವಿಡ್ ರೋಗಿಗಳಿರುವ ಸಾಧ್ಯತೆಯಿದೆ ಎಂದು ಯುಸಿಎಲ್‌ನ ನ್ಯೂರೋಸೈಂಟಿಸ್ಟ್ ಹಾಗೂ ವರದಿಯ ಲೇಖಕ ಅಥೆನಾ ಅಕ್ರಮಿ ಹೇಳಿದ್ದಾರೆ. ಸ್ವತಃ ಅಥೆನಾ ಕೋವಿಡ್ ಸೋಂಕಿಗೆ ತುತ್ತಾಗಿ 16 ತಿಂಗಳುಗಳ ಬಳಿಕ ಈಗಲೂ ಲಕ್ಷಣಗಳನ್ನು ಅನುಭವಿಸುತ್ತಿದ್ದಾರೆ.







