ಪ್ರೀತಿಗೆ ಒಲ್ಲೆ ಎಂದ ಯುವತಿ: ಸಿಟ್ಟಿಗೆದ್ದ ಯುವಕನಿಂದ 7 ಕಾರುಗಳ ಮೇಲೆ ಕಲ್ಲು ತೂರಾಟ!

ಬೆಂಗಳೂರು, ಜು.16: ಕ್ಷುಲ್ಲಕ ಕಾರಣಕ್ಕೆ ಏಳು ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿದ ಆರೋಪದಲ್ಲಿ ಯುವಕನೋರ್ವನನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸತೀಶ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಬಸವೇಶ್ವರ ನಗರ ಠಾಣೆ ವ್ಯಾಪ್ತಿಯ ಕುರುಬರಹಳ್ಳಿಯ ಪೈಪ್‌ಲೈನ್ ರಸ್ತೆಯಲ್ಲಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಜೆ.ಸಿ.ನಗರದಲ್ಲಿ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಯುವತಿಯೊಬ್ಬಳನ್ನು ಆರೋಪಿ ಸತೀಶ್ ಪ್ರೀತಿಸುತ್ತಿದ್ದನೆನ್ನಲಾಗಿದೆ. ಇತ್ತೀಚೆಗೆ ಆಕೆಯೊಂದಿಗೆ ಗಲಾಟೆ ಮಾಡಿಕೊಂಡಿದ್ದ. ಹೀಗಾಗಿ, ಯುವತಿ ಪ್ರೀತಿ ಬೇಡ ಎಂದು ಹೇಳಿದ್ದಳು. ಇದೇ ಕಾರಣದಿಂದ ಗುರುವಾರ ರಾತ್ರಿ ಯುವತಿ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದ ಸತೀಶ್, ಮನೆಗೆ ಮರುಳುತ್ತಿದ್ದ ಸಂದರ್ಭದಲ್ಲಿ ಈ ಕೃತ್ಯವೆಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Next Story





