ಕೊವ್ಯಾಕ್ಸಿನ್ ಅಭಿವೃದ್ಧಿಪಡಿಸಲು 35 ಕೋಟಿ ರೂ. ತೆರಿಗೆಹಣ ವ್ಯಯಿಸಿರುವುದನ್ನು ಒಪ್ಪಿಕೊಂಡ ಐಸಿಎಂಆರ್

ಹೊಸದಿಲ್ಲಿ: ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸುವ ಕೋವ್ಯಾಕ್ಸಿನ್ ಕೋವಿಡ್ ಲಸಿಕೆಯ ಮಾರಾಟದಿಂದ ತಾನು ಗಳಿಸುತ್ತಿರುವ ಆದಾಯದ ಕುರಿತು ಮಾಹಿತಿ ನೀಡಲು ನಿರಾಕರಿಸಿರುವ ಐಸಿಎಂಆರ್, ಅದೇ ಸಮಯ ಈ ಲಸಿಕೆ ಅಭಿವೃದ್ಧಿಗೆ ಹಾಗೂ ಟ್ರಯಲ್‍ಗಳಿಗೆ ತಾನು ರೂ 35 ಕೋಟಿ ತೆರಿಗೆದಾರರ ಹಣವನ್ನು ಬಳಸಿರುವುದನ್ನು ಆರ್‍ಟಿಐ ಅರ್ಜಿಯೊಂದಕ್ಕೆ ಉತ್ತರಿಸುವ ವೇಳೆ ಹೇಳಿದೆ.
ಆದರೆ ಕೇಂದ್ರ ಸರಕಾರ ಈ ಹಿಂದೆ ಸುಪ್ರೀಂ ಕೋರ್ಟ್ ಗೆ ನೀಡಿದ ಉತ್ತರದಲ್ಲಿ ತಾನು ಕೊವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಲಸಿಕೆ ಅಭಿವೃದ್ಧಿ ಯಾ ಸಂಶೋಧನೆಗೆ ಯಾವುದೇ ಸರಕಾರಿ ಧನಸಹಾಯ, ಅನುದಾನ ನೀಡಿಲ್ಲ ಎಂದು ಹೇಳಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಅನಾಮಿಕರಾಗಿಯೇ ಉಳಿಯಬಯಸಿರುವ ಬೆಂಗಳೂರು ಮೂಲದ ಕಾನೂನು ವಿದ್ಯಾರ್ಥಿ ಹಾಗೂ ಸಾಮಾಜಿಕ ಹೋರಾಟಗಾರರೊಬ್ಬರು ಆರ್‍ಟಿಐ ಅರ್ಜಿ ಸಲ್ಲಿಸಿ ಐಸಿಎಂಆರ್ ಕೊವ್ಯಾಕ್ಸಿನ್ ಟ್ರಯಲ್‍ಗಳಿಗೆ ಎಷ್ಟು ವೆಚ್ಚ ಮಾಡಿದೆ ಹಾಗೂ ಅದರ ಅಭಿವೃದ್ಧಿಗೆ ಒಟ್ಟಾರೆ ಎಷ್ಟು ಖರ್ಚು ಮಾಡಿದೆ ಎಂಬ ಮಾಹಿತಿ ಕೋರಿದ್ದರು.
"ಟ್ರಯಲ್ ಸಹಿತ ಲಸಿಕೆ ಅಭಿವೃದ್ಧಿಗೆ ಐಸಿಎಂಆರ್ ಸುಮಾರು ರೂ 35 ಕೋಟಿ ವೆಚ್ಚ ಮಾಡಿದೆ," ಎಂದು ತನ್ನ ಉತ್ತರದಲ್ಲಿ ಸಂಸ್ಥೆ ಹೇಳಿತ್ತು.
ತಾನು ಭಾರತ್ ಬಯೋಟೆಕ್ ಜತೆ ಲಸಿಕೆ ಮಾರಾಟದ ಲಾಭ ಹಂಚಿಕೆ ಹಾಗೂ ಲಸಿಕೆಯ ಅದರ ಬೌದ್ಧಿಕ ಆಸ್ತಿ ಹಂಚಿಕೆ ಕುರಿತು ಒಪ್ಪಂದಕ್ಕೆ ಬಂದಿರುವುದನ್ನು ಐಸಿಎಂಆರ್ ಒಪ್ಪಿದ್ದರೂ ಅದರ ಮಾಹಿತಿಯನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಕೇಂದ್ರ ಸರಕಾರ ಈ ಹಿಂದೆ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಮಾಹಿತಿಯಲ್ಲಿ ಕೊವ್ಯಾಕ್ಸಿನ್ ಮಾರಾಟದಿಂದ ಐಸಿಎಂಆರ್‍ಗೆ ಶೇ5ರಷ್ಟು ರಾಯಧನ ದೊರೆಯುತ್ತದೆ ಎಂದು ತಿಳಿಸಿತ್ತು.







